ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಉದ್ದೇಶದಿಂದ ರಾಹುಲ್ ಗಾಂಧಿ ದಿಢೀರ್ ದೈವಭಕ್ತರೂ, ಜನಿವಾರಧಾರಿಯೂ ಆಗಿರಬಹುದು. ಆ ಕಾರಣಕ್ಕೇ ಅವರು ಹಿಂದು ದೇವಸ್ಥಾನಗಳನ್ನು ಸುತ್ತುತ್ತಿರಬಹುದು. ಆದರೆ, ಅವರದೇ ಪಕ್ಷದ ಹಿರಿಯ ನಾಯಕರು ಒಂದಾದ ಮೇಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್‌ನ ಮೃದು ಹಿಂದುತ್ವದ ತಂತ್ರಗಾರಿಕೆಯನ್ನೇ ಹಳಿತಪ್ಪಿಸುತ್ತಿದ್ದಾರೆ ಎಂಬುದು ಕೂಡ ನಿಜ. ಈ ಹೇಳಿಕೆಗಳು ಬಿಜೆಪಿಯಿಂದ ಕಾಂಗ್ರೆಸ್ ಪಕ್ಷ ಸೆಳೆಯಲು ಯತ್ನಿಸುತ್ತಿರುವ ಹಿಂದು ಮತಗಳನ್ನು ಮತ್ತೆ ಕಾಂಗ್ರೆಸ್‌ನಿಂದ ದೂರ ಮಾಡುವ ಸಾಧ್ಯತೆಯೇ ಹೆಚ್ಚು.

ಇತ್ತೀಚಿನ ಉದಾಹರಣೆಯೆಂದರೆ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಹೇಳಿಕೆ. ಎಲ್ಲಿ ಹಿಂದುಗಳ ಮತ ಕಳೆದುಕೊಳ್ಳುತ್ತೇವೋ ಎಂಬ ಹೆದರಿಕೆಯಿಂದ ನಮ್ಮದೇ ಪಕ್ಷದ ಹಿಂದು ನಾಯಕರು ನನ್ನನ್ನು ಪ್ರಚಾರಕ್ಕೇ ಕರೆಯುವುದಿಲ್ಲ ಎಂದು ಅವರು ಹೇಳಿದರು. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಈ ಹೇಳಿಕೆ ನೀಡಿರುವುದು ಲಖನೌದ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ. ಇದಕ್ಕೂ ಮುನ್ನ ಕಾಂಗ್ರೆಸ್‌ನ ಇನ್ನೊಬ್ಬ ಹಿರಿಯ ನಾಯಕ, ತಿರುವನಂತಪುರದ ಸಂಸದ ಶಶಿ ತರೂರ್ ತಮ್ಮ ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದ್ದರು. ಇನ್ನೊಂದು ಧಾರ್ಮಿಕ ಸ್ಥಳವನ್ನು ಕೆಡವಿದ ಜಾಗದಲ್ಲಿ ಹಿಂದುಗಳು ಯಾವತ್ತೂ ತಮ್ಮ ದೇವಸ್ಥಾನ ಕಟ್ಟಲು ಬಯಸುವುದಿಲ್ಲ ಎಂದು ಅವರು ಹೇಳಿದ್ದರು. ಈ ಹೇಳಿಕೆಗೂ ತನಗೂ ಸಂಬಂಧವಿಲ್ಲ ಎಂದ ಕಾಂಗ್ರೆಸ್ ಪಕ್ಷ, ಇದು ತರೂರ್ ಅವರ ವೈಯಕ್ತಿಕ ಹೇಳಿಕೆ ಎಂದು ನುಣುಚಿಕೊಂಡಿತು. 

ಶಿವಭಕ್ತ ರಾಹುಲ್ 
ರಾಹುಲ್ ಗಾಂಧಿ ಮೃದು ಹಿಂದುತ್ವದ ಮೊರೆ ಹೋಗಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿ ಬಹಳ ಬೇಗ ಇದನ್ನು ಗುರುತಿಸಿದೆ. ಇತ್ತೀಚೆಗಷ್ಟೇ ರಾಹುಲ್ ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಕಮಟನಾಥ ದೇವಸ್ಥಾನ ಹಾಗೂ ಡಾಟಿಯಾದಲ್ಲಿರುವ ಪೀತಾಂಬರ ಪೀಠಕ್ಕೆ ಭೇಟಿ ನೀಡಿದ್ದರು. ನಂತರ ತಮ್ಮ ಲೋಕಸಭೆ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಠಿಗೆ ಹೋದಾಗ ಕನ್ವಾರಿಯಾಗಳು ಅವರನ್ನು ಶಿವಭಕ್ತ ಎಂದು ಹೊಗಳಿದರು. ಇತ್ತೀಚೆಗಷ್ಟೇ ರಾಹುಲ್ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿಬಂದಿರುವುದರಿಂದ ಅವರಿಗೆ ಶಿವಭಕ್ತನ ಪಟ್ಟ ಸಿಕ್ಕಿದೆ. ಕಾಂಗ್ರೆಸ್‌ನ ಮೃದು ಹಿಂದುತ್ವವಾದಿ ಧೋರಣೆಗೆ ಯಾವುದೇ ಅಡ್ಡಿಬರಬಾರದೆಂದು ರಾಹುಲ್ ಸಾಕಷ್ಟು ಪ್ರಯತ್ನ ಕೂಡ ಮಾಡುತ್ತಿದ್ದಾರೆ. ಅದಕ್ಕೆಂದೇ ಮಧ್ಯಪ್ರದೇಶದ ಚುನಾವಣೆಯಲ್ಲಿ ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸಿಗ ದಿಗ್ವಿಜಯ್ ಸಿಂಗ್ ಅವರನ್ನು ಪ್ರಚಾರದಿಂದ ಸಂಪೂರ್ಣ ದೂರವಿಟ್ಟಿದ್ದಾರೆ. ಹಿಂದು ಉಗ್ರವಾದದಂತಹ ವಿವಾದಾತ್ಮಕ ವಿಷಯಗಳನ್ನು ಸೃಷ್ಟಿಸಿದ್ದ ಇತಿಹಾಸ ದಿಗ್ವಿಜಯ್ ಸಿಂಗ್ ಅವರಿಗಿದೆ.

ಕಾಂಗ್ರೆಸ್ ಬಳಿ ಸ್ಪಷ್ಟ ನೀತಿ ಎಲ್ಲಿದೆ?
ಆದರೂ, ಹಿಂದುಗಳ ಮತ ಸೆಳೆಯುವುದು ಕಾಂಗ್ರೆಸ್‌ಗೆ ಸುಲಭವಿಲ್ಲ. ಏಕೆಂದರೆ ಹಿಂದು ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಕಾಂಗ್ರೆಸ್‌ಗೊಂದು ಸ್ಪಷ್ಟ ನೀತಿಯೇ ಇಲ್ಲ. ಮೇಲಾಗಿ ಆ ಪಕ್ಷದ ಹಿರಿಯ ನಾಯಕರು ಆಗಾಗ ಹಿಂದು ವಿರೋಧಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇನ್ನು, ರಾಮಮಂದಿರದ ವಿಷಯದಲ್ಲಿ ಪಕ್ಷಕ್ಕೊಂದು ಸ್ಪಷ್ಟವಾದ ನಿಲುವು ಇಲ್ಲ. ಹೀಗಾಗಿ, ಸ್ಪಷ್ಟವಾದ ಹಿಂದುತ್ವವಾದಿ ಅಜೆಂಡಾ ಹೊಂದಿರುವ ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ನೀಡುವ ಹಿಂದು ಮತದಾರರನ್ನು ತನ್ನತ್ತ ಸೆಳೆಯುವುದು ಕಾಂಗ್ರೆಸ್‌ಗೆ ಈಗಲೂ ಸಾಧ್ಯವಾಗುತ್ತಿಲ್ಲ.

ದೇಶದಲ್ಲೀಗ ರಾಮ ಮಂದಿರದ ವಿಷಯ ಮತ್ತೆ ಜೋರಾಗಿ ಚರ್ಚೆಗೆ ಬಂದಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಹಾಗೂ ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯುವುದರಿಂದ ಈ ವಿಷಯ ಇನ್ನುಮುಂದೆ ಸದಾ ಚರ್ಚೆಯಲ್ಲಿರುತ್ತದೆ. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಪ್ರತ್ಯೇಕ ಕಾಯ್ದೆ ತರಬೇಕೆಂದು ಆಗ್ರಹಿಸಿದ್ದಾರೆ. ಅದಕ್ಕೆ ಬಿಜೆಪಿ ನಾಯಕರಿಂದ ಭಾರಿ ಬೆಂಬಲ ಕೂಡ ವ್ಯಕ್ತವಾಗಿದೆ. ಅಂದರೆ, ಮುಂದಿನ ದಿನಗಳಲ್ಲಿ ಅಯೋಧ್ಯೆಯ ವಿಷಯ ಅತ್ಯಂತ ಪ್ರಮುಖವಾಗಲಿದೆ ಎಂಬ ಸಂದೇಶವನ್ನು ಇದು ದೇಶಾದ್ಯಂತ ರವಾನಿಸಿದೆ.

ಇದಕ್ಕೆ ವಿರುದ್ಧವಾಗಿ, ರಾಹುಲ್ ಗಾಂಧಿಯವರ ದೇವಸ್ಥಾನ ಭೇಟಿಗಳನ್ನು ಹೊರತುಪಡಿಸಿದರೆ, ಹಿಂದು ಸಮುದಾಯಕ್ಕೆ ಸಂಬಂಧಪಟ್ಟ ಯಾವುದೇ ವಿಷಯದಲ್ಲಿ ಗಟ್ಟಿಯಾದ ನಿಲುವು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ. ಇನ್ನೊಂದೆಡೆ, ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಖ್ಯಾತ ವಕೀಲ ಕಪಿಲ್ ಸಿಬಲ್ ಅವರು ಅಯೋಧ್ಯೆ ಪ್ರಕರಣದಲ್ಲಿ ಸುನ್ನಿ ವಕ್ಫ್ ಬೋರ್ಡ್ ಪರ ವಕಾಲತ್ತು ವಹಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಅವರು ಅಯೋಧ್ಯೆ ಪ್ರಕರಣವನ್ನು ವಿಳಂಬಗೊಳಿಸಲು ಯತ್ನಿಸುತ್ತಿದ್ದಾರೆಂಬ ಆರೋಪ ಈಗಾಗಲೇ ಕೇಳಿಬಂದಿದೆ. ಹೀಗಾಗಿ, ಹಿಂದು ಮತಗಳ ಧ್ರುವೀಕರಣದ ಲಾಭ ಪಡೆಯಬೇಕೆಂಬ ಆಸೆಯಿದ್ದರೆ ಕಾಂಗ್ರೆಸ್ ಪಕ್ಷ ರಾಮ ಮಂದಿರದ ಬಗ್ಗೆ ಮಾತನಾಡುವುದು ಬಹಳ ಮುಖ್ಯ. ಆಗ ಕೆಲವೆಡೆಯಾದರೂ ಬಿಜೆಪಿಯನ್ನು ಅದರದೇ ತಂತ್ರಗಾರಿಕೆಯಿಂದ ಸೋಲಿಸಲು ಸಾಧ್ಯವಾದೀತು.

ಕೈಲಿರೋದೂ ಹೋದರೆ ಎಂಬ ಭಯ
ರಾಮ ಮಂದಿರದ ಬಗ್ಗೆ ಕಾಂಗ್ರೆಸ್ ಒಂದು ಸ್ಪಷ್ಟ ನಿಲುವು ತೆಗೆದುಕೊಂಡು ಮಾತನಾಡುವುದು, ತನ್ಮೂಲಕ ಹಿಂದುಗಳನ್ನು ತನ್ನದೇ ಸೀಮಿತ ಚೌಕಟ್ಟಿನಲ್ಲಿ ಓಲೈಸುವುದು ಎಲ್ಲ ಸರಿ. ಆದರೆ,
ಇದಕ್ಕೊಂದು ಪ್ರಮುಖ ಅಡ್ಡಿಯಿದೆ. ಅದು - ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರಾಗಿರುವ ಅಲ್ಪಸಂಖ್ಯಾತರಿಗೆ ಆಗಬಹುದಾದ ಬೇಸರ. ಕಾಂಗ್ರೆಸ್ ಪಕ್ಷ ಹಿಂದುಗಳ ಓಲೈಕೆಗೆ ಕೈಹಾಕಿದರೆ ಲೋಕಸಭೆ ಚುನಾವಣೆಯಲ್ಲಿ ಸಾಮಾನ್ಯವಾಗಿ ಕಾಂಗ್ರೆಸ್ಸನ್ನೇ ಬೆಂಬಲಿಸುತ್ತ ಬಂದಿರುವ ಮುಸ್ಲಿಮರು ಸಿಟ್ಟಾಗಬಹುದು. ಹೀಗಂತ ಕಾಂಗ್ರೆಸ್‌ನ ಕೆಲ ಹಿರಿಯ ನಾಯಕರೇ ಹೇಳುತ್ತಾರೆ. ಈ ವಿಚಾರದಲ್ಲಿ ರಾಹುಲ್ ಹಾಗೂ ಇತರ ನಾಯಕರು ಎಚ್ಚರ ವಹಿಸಲೇಬೇಕಾಗುತ್ತದೆ. ಕೈಲಿಲ್ಲದ ಮತಗಳನ್ನು ಪಡೆಯಲು ಕೈಲಿರುವ ಮತಗಳನ್ನು ಕಳೆದುಕೊಳ್ಳಬಾರದಲ್ಲವೇ? 

ಲೇಖನ: ನೀಲಾಂಶು ಶುಕ್ಲಾ, ಪತ್ರಕರ್ತ, ಇಂಡಿಯಾ ಟುಡೇ