ನ್ನನ್ನು ದುರಂತ ನಾಯಕ ಎನ್ನುವವರು ರೈತರ ಸಾಲಮನ್ನಾ ಯಾಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು : ನನ್ನನ್ನು ದುರಂತ ನಾಯಕ ಎನ್ನುವವರು ರೈತರ ಸಾಲಮನ್ನಾ ಯಾಕೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ತಿರುಗೇಟು ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಖಾಸಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ಅವರು, ನಾನು ಭಾವುಕ ಜೀವಿ. ಜನರಿಗಾಗಿ ಕಣ್ಣೀರು ಹಾಕಿದ್ದೇನೆಯೇ ಹೊರತು ಬೇರೆ ಯಾವುದೇ ಕಾರಣಕ್ಕಲ್ಲ.

ಮಿತ್ರಪಕ್ಷ ಕಾಂಗ್ರೆಸ್‌ನಿಂದ ನನಗೆ ಯಾವುದೇ ಕಿರುಕುಳ ಅಥವಾ ತೊಂದರೆ ಉಂಟಾಗಿಲ್ಲ. ಕಾಂಗ್ರೆಸ್ ನಾಯಕರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು. ಆದರೆ, ನಾನು ಕಣ್ಣೀರು ಹಾಕಿರುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎನ್ನುವ ಹೇಳಿಕೆ ನೀಡಿರುವ ಜೇಟ್ಲಿ ಅವರು ನನ್ನನ್ನು ದುರಂತ ನಾಯಕ ಎಂದಿದ್ದಾರೆ. 

ಅವರು ಹೇಳಿದಂತೆ ನಾನು ದುರಂತ ನಾಯಕ ಎಂದು ಒಂದು ಕ್ಷಣ ಒಪ್ಪಿಕೊಂಡರೂ ನಾನು ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲೇ ರೈತರಿಗಾಗಿ ದೊಡ್ಡ ಮೊತ್ತದ ಸಾಲ ಮನ್ನಾ ಘೋಷಣೆ ಮಾಡಿದ್ದೇನೆ. ಕೇಂದ್ರ ಸರ್ಕಾರದ ಹಣಕಾಸು ಸಚಿವರಾಗಿರುವ ಜೇಟ್ಲಿ ಅವರು ನಾಲ್ಕು ವರ್ಷಗಳಾದರೂ ಇದುವರೆಗೆ ಯಾಕೆ ರೈತರ ಸಾಲಮನ್ನಾ ಮಾಡಲಿಲ್ಲ ಎಂದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಪ್ರಧಾನಿ ಮೋದಿ ಅವರು ಕರ್ನಾಟಕದಲ್ಲಿ ನಡೆಸಿದ ಮೊದಲ ಪ್ರಚಾರ ಸಭೆಯಲ್ಲಿ ಎಚ್.ಡಿ.ದೇವೇಗೌಡರನ್ನು ಹಾಡಿಹೊಗಳಿದ್ದರು. ಅದು ಮತ ವಿಭಜನೆಗಾಗಿ ಮಾತ್ರ ಎಂಬುದು ಗೊತ್ತಿದೆ. ಅದೊಂದು ಬಿಜೆಪಿಯ ಚುನಾವಣಾ ತಂತ್ರದ ಭಾಗವಾಗಿತ್ತು ಎಂದರು. 

ಚುನಾವಣೆಯ ಸಂಪೂರ್ಣ ಫಲಿತಾಂಶ ಹೊರಬೀಳುವ ಮೊದಲೇ ಕಾಂಗ್ರೆಸ್‌ನಿಂದ ಸಮ್ಮಿಶ್ರ ಸರ್ಕಾರ ರಚನೆಯ ಪ್ರಸ್ತಾಪವನ್ನು ಮೊದಲು ಮುಂದಿ ಟ್ಟಿದ್ದು ಯಾರು ಎಂಬ ಪ್ರಶ್ನೆಗೆ ಉತ್ತರಿಸದ ಕುಮಾರ ಸ್ವಾಮಿ, ನನ್ನ ತಂದೆ ದೇವೇಗೌಡರ ಬಹುಕಾಲದ ಮಿತ್ರ ಗುಲಾಂ ನಬಿ ಆಜಾದ್. ಅವರು ನನಗೆ ದೂರವಾಣಿ ಕರೆ ಮಾಡಿ ಪ್ರಸ್ತಾಪ ಮುಂದಿರಿಸಿದರು. ಬೇಷರತ್ ಬೆಂಬಲ ಎಂಬುದಾಗಿಯೂ ಹೇಳಿದರು.

ನಾನು ಒಪ್ಪಿಕೊಂಡೆ ಎಂದು ತಿಳಿಸಿದರು. ಬಿಜೆಪಿ ಜೊತೆಗೆ ಸರ್ಕಾರ ರಚನೆ ಅವಕಾಶ ಇದ್ದರೂ ಕಾಂಗ್ರೆಸ್ ಜೊತೆಗೆ ರಚಿಸಲು ತಕ್ಷಣ ಒಪ್ಪಿಕೊಂಡಿದ್ದು ಯಾಕೆ ಎಂಬ ಪ್ರಶ್ನೆಗೆ, ನನ್ನ ತಂದೆಗೆ ಅಂಟಿಕೊಂಡಿರುವ ಕಪ್ಪು ಚುಕ್ಕೆ ಅಳಿಸಿಹಾಕುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದೇನೆ. 2006 ರಲ್ಲಿ ತಂದೆಯ ಮಾತನ್ನು ಧಿಕ್ಕರಿಸಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದೆ. ಅದರಿಂದ ದೇವೇಗೌಡರ ಜಾತ್ಯತೀತ ನಿಲುವಿನ ಬಗ್ಗೆ ಆರೋಪ ಕೇಳಿಬಂದಿತ್ತು. ಹೀಗಾಗಿ ಅದನ್ನು ಅಳಿಸಿ ಹಾಕುವ ಉದ್ದೇಶದಿಂದ ಈ ನಿರ್ಣಯ ಕೈಗೊಂಡೆ ಎಂದು ಕುಮಾರಸ್ವಾಮಿ ವಿವರಿಸಿದರು.