ನಾಯಿಗಳ ಬಣ್ಣ ಬದಲಾಗುತ್ತಿವೆ !

ಮುಂಬೈ(ಆ.12): ಗೋಸುಂಬೆ ಬಣ್ಣ ಬದಲಿಸುವುದು ಗೊತ್ತು. ಆದರೆ ನಾಯಿಗಳೂ ಬಣ್ಣ ಬದಲಿಸುತ್ತಿವೆ ಎಂಬ ಅಚ್ಚರಿಯ ವಿಷಯ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಟಲೋಜಾ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಹಲವು ಬೀದಿ ನಾಯಿಗಳ ಬಣ್ಣ ಇದ್ದಕ್ಕಿದ್ದಂತೆ ನೀಲಿ ಬಣ್ಣಕ್ಕೆ ತಿರುಗಿ ಅವು ವಿಚಿತ್ರವಾಗಿ ಕಾಣಿಸುತ್ತಿವೆ. ಹಾಗೆಂದು ಇದೇನು ಪವಾಡವಲ್ಲ. ಟಲೋಜಾ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಔಷಧ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕೈಗಾರಿಕೆಗಳಲ್ಲಿ ಬಳಸುವ ನೀರನ್ನು ಸೂಕ್ತವಾಗಿ ಸಂಸ್ಕರಿಸದೇ ಸ್ಥಳೀಯ ನದಿಗೆ ಹರಿಯ ಬಿಡಲಾಗುತ್ತಿದೆ.

ಪರಿಣಾಮ ನೀರು ಕುಡಿಯಲು, ಇಲ್ಲವೇ ಅತ್ತಿಂದಿತ್ತ ಸಾಗಲು ನಾಯಿಗಳು ನೀರಿನಲ್ಲಿ ಸಾಗುವಾಗ ಅವುಗಳ ಮೈಬಣ್ಣ ಪೂರ್ತಿಯಾಗಿ ನೀಲಿ ವರ್ಣಕ್ಕೆ ತಿರುಗುತ್ತಿದೆ. ಇದು ಸ್ಥಳೀಯವಾಗಿ ನದಿಗಳ ಮಾಲಿನ್ಯವನ್ನು ಎತ್ತಿತೋರಿಸಿದೆ. ಈ ಹಿನ್ನೆಲೆಯಲ್ಲಿ ನೀಲಿ ವರ್ಣಕ್ಕೆ ತಿರುಗಿದ ಶ್ವಾನಗಳ ಫೋಟೊಗಳನ್ನು ದಾಖಲಿಸಿಕೊಂಡಿರುವ ನವಿ ಮುಂಬೈ ಪ್ರಾಣಿ ಸಂರಕ್ಷಣಾ ಘಟಕ ಈ ಬಗ್ಗೆ ಮಹಾರಾಷ್ಟ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದೆ.