ನವದೆಹಲಿ: ಬಿಜೆಪಿಗೆ ಶಾಕ್‌ ನೀಡಿದ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ, ತಕ್ಷಣಕ್ಕೆ ಲೋಕಸಭೆ ಚುನಾವಣೆ ನಡೆದರೆ ಜನರ ಮೂಡ್‌ ಹೇಗಿದೆ ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಸಮೀಕ್ಷೆಯೊಂದನ್ನು ನಡೆಸಲಾಗಿದೆ. ಈ ಸಮೀಕ್ಷೆ ಅನ್ವಯ, ಉತ್ತರಪ್ರದೇಶದಲ್ಲಿ ಮಾಯಾವತಿ- ಅಖಿಲೇಶ್‌ ಮೈತ್ರಿ ಸಾಧ್ಯವಾಗದೇ ಹೋದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತೊಮ್ಮೆ ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಒಂದು ವೇಳೆ ಎಸ್‌ಪಿ- ಬಿಎಸ್ಪಿ ಮೈತ್ರಿ ಕೂಟ ರಚಿಸಿಕೊಂಡರೆ ಅದು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಎನ್‌ಡಿಎ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಅಡ್ಡಿಯಾಗಲಿದೆ ಎಂದು ಸಮೀಕ್ಷೆ ಹೇಳಿದೆ.

‘ಕನ್ನಡಪ್ರಭ’ ಬಳಗದ ‘ರಿಪಬ್ಲಿಕ್‌’ ಸುದ್ದಿವಾಹಿನಿಯು ಸಿ ವೋಟರ್‌ ಜೊತೆಗೂಡಿ, ದೇಶಾದ್ಯಂತ ಎಲ್ಲಾ ರಾಜ್ಯಗಳಲ್ಲಿ ತಕ್ಷಣಕ್ಕೆ ಲೋಕಸಭೆಗೆ ಚುನಾವಣೆ ನಡೆದರೆ ಯಾವ ಫಲಿತಾಂಶ ಬರಬಹುದು ಎಂಬುದರ ಸಮೀಕ್ಷೆ ನಡೆಸಿದೆ. ಇದರನ್ವಯ, ಕೇಂದ್ರದಲ್ಲಿ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶ ನಿರ್ಧರಿಸಲಿದೆ ಎಂಬುದು ಖಚಿತವಾಗಿದೆ. ಒಂದು ವೇಳೆ ಉತ್ತರಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಮತ್ತು ಅಖಿಲೇಶ್‌ಸಿಂಗ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ಮೈತ್ರಿಮಾಡಿಕೊಂಡು ಸ್ಪರ್ಧಿಸಿದ್ದೇ ಆದರಲ್ಲಿ, ಎನ್‌ಡಿಎ ಮೈತ್ರಿಕೂಟದ ಬಲ ಈ ಬಾರಿ 247 ಸ್ಥಾನಕ್ಕೆ ಕುಸಿಯಲಿದೆ. ಯುಪಿಎ 171 ಸ್ಥಾನ ಹಾಗೂ ಇತರರು 125 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಒಂದು ವೇಳೆ ಉತ್ತರಪ್ರದೇಶದಲ್ಲಿ ಬಿಎಸ್‌ಪಿ- ಎಸ್‌ಪಿ ಮೈತ್ರಿ ಸಾಧ್ಯವಾಗದೇ ಹೋದಲ್ಲಿ ಎನ್‌ಡಿಎ ಮೈತ್ರಿಕೂಟ 291 ಸ್ಥಾನಗಳೊಂದಿಗೆ ಮತ್ತೊಮ್ಮೆ ಸುಲಭವಾಗಿ ಅಧಿಕಾರಕ್ಕೆ ಬರಲಿದೆ. ಯುಪಿಎ 171 ಸ್ಥಾನ ಹಾಗೂ ಇತರರು 81 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

80 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಕಳೆದ ಬಾರಿ ಎನ್‌ಡಿಎ ಮೈತ್ರಿಕೂಟ 73 ಸ್ಥಾನ ಗೆದ್ದಿತ್ತು. ಎಸ್‌ಪಿ 5, ಕಾಂಗ್ರೆಸ್‌ 2 ಹಾಗೂ ಬಿಎಸ್‌ಪಿ ಶೂನ್ಯ ಸಂಪಾದನೆ ಮಾಡಿತ್ತು. ಆದರೆ ಈ ಬಾರಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿವೆ. ಹೀಗಾದಲ್ಲಿ ಈ ಎರಡು ಪಕ್ಷಗಳ ಮೈತ್ರಿಯು ಭರ್ಜರಿ 50 ಸ್ಥಾನ ಗೆಲ್ಲಲಿದೆ. ಎನ್‌ಡಿಎ ಮೈತ್ರಿಕೂಟ ಕೇವಲ 28 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಕೇವಲ 2 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ.

ದಕ್ಷಿಣದಲ್ಲಿ ಯುಪಿಎ ಮುನ್ನಡೆ: ಇನ್ನು ದಕ್ಷಿಣದ 6 ರಾಜ್ಯಗಳ 129 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟ 15, ಯುಪಿಎ ಮೈತ್ರಿಕೂಟ 80 ಹಾಗೂ ಇತರರು 34 ಸ್ಥಾನ ಗೆಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಕರ್ನಾಟಕದಲ್ಲಿ ಸಮಬಲ ಹೋರಾಟ

ಉತ್ತರಪ್ರದೇಶದಂತೆ ಕರ್ನಾಟಕದಲ್ಲೂ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿಕೂಟ, ಬಿಜೆಪಿಯ ಮುನ್ನಡೆಗೆ ಅಡ್ಡಗಾಲಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳ ಪೈಕಿ ಬಿಜೆಪಿ 17, ಕಾಂಗ್ರೆಸ್‌ 9 ಮತ್ತು ಜೆಡಿಎಸ್‌ 2 ಸ್ಥಾನ ಗೆದ್ದಿದ್ದವು. ಆದರೆ ಈ ಬಾರಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮಾಡಿಕೊಂಡರೆ, ಬಿಜೆಪಿಯ ಬಲ 13ಕ್ಕೆ ಇಳಿಯಲಿದೆ. ಕಾಂಗ್ರೆಸ್‌ ಬಲ 10ಕ್ಕೆ ಮತ್ತು ಜೆಡಿಎಸ್‌ ಬಲ 5ಕ್ಕೆ ಏರಲಿದೆ ಎಂದು ಸಮೀಕ್ಷೆ ಹೇಳಿದೆ.