ಬೆಂಗಳೂರು [ಸೆ.02]:  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ 17 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಹನ್ನೆರಡು ದಿನಗಳು ಕಳೆದಿದ್ದು, ಜಿಲ್ಲಾ ಉಸ್ತುವಾರಿಗಳ ನೇಮಕ ಇನ್ನಷ್ಟುವಿಳಂಬವಾಗುವ ಅನುಮಾನವಿದೆ.

ರಾಜಧಾನಿ ಬೆಂಗಳೂರು ಮತ್ತು ಬೆಳಗಾವಿಯ ಉಸ್ತುವಾರಿಗಳ ಸಂಬಂಧ ಗೊಂದಲ ಉಂಟಾಗಿದ್ದು, ಅದನ್ನು ಬಗೆಹರಿಸಿಕೊಂಡ ನಂತರವೇ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಪ್ರಕ್ರಿಯೆ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನೇನು ಒಂದೆರಡು ದಿನಗಳಲ್ಲಿ ಉಸ್ತುವಾರಿ ಸಚಿವರ ನೇಮಕವಾಗಲಿದೆ ಎಂಬ ಸುದ್ದಿ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ದಟ್ಟವಾಗಿ ಕೇಳಿಬಂದಿತ್ತು. ಈಗ ಹೊರಬೀಳುತ್ತಿರುವ ಸುದ್ದಿಯ ಪ್ರಕಾರ, ನೇಮಕ ಇನ್ನಷ್ಟುವಿಳಂಬವಾಗುವ ಸಂಭವ ಹೆಚ್ಚಾಗಿದೆ. ಉಸ್ತುವಾರಿಗಳ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿದ ನಂತರ ಆಂತರಿಕವಾಗಿ ಭಿನ್ನಾಭಿಪ್ರಾಯ ಮೂಡುವಂತಾಗಬಾರದು. ಗೊಂದಲ ಪರಿಹರಿಸಿಕೊಂಡ ನಂತರವೇ ನೇಮಕ ಮಾಡುವುದು ಸೂಕ್ತ ಎಂಬ ನಿಲವಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಂದಿದ್ದಾರೆ ಎನ್ನಲಾಗಿದೆ.

ಇದರ ನಡುವೆಯೇ ದಸರಾ ಉತ್ಸವದ ಹಿನ್ನೆಲೆಯಲ್ಲಿ ಮೈಸೂರಿಗೆ ವಿ.ಸೋಮಣ್ಣ ಅವರನ್ನು ಉಸ್ತುವಾರಿಯಾಗಿ ಅಧಿಕೃತವಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ತಮ್ಮ ತವರು ಜಿಲ್ಲೆ ಶಿವಮೊಗ್ಗವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ನೀಡುವುದಾಗಿಯೂ ಪ್ರಕಟಿಸಿದ್ದಾರೆ.

ಅನರ್ಹಗೊಂಡ ಶಾಸಕರ ಪೈಕಿ ಬಹುತೇಕರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಸರ್ಕಾರದಲ್ಲಿ ಸಚಿವ ಸ್ಥಾನ ಅಲಂಕರಿಸುವುದು ನಿಶ್ಚಿತವಾಗಿದ್ದರಿಂದ ಜಿಲ್ಲಾ ಉಸ್ತುವಾರಿಯಲ್ಲೂ ಅವರಿಗೆ ಪಾಲು ನೀಡಬೇಕಾಗಿ ಬರಬಹುದು. ಹೀಗಾಗಿ, ನೇಮಕ ಘೋಷಣೆ ಮಾಡುವ ಮೊದಲು ಇತ್ಯರ್ಥಪಡಿಸಿಕೊಳ್ಳುವುದಕ್ಕೆ ಒಲವು ವ್ಯಕ್ತವಾಗಿದೆ.

ಮುಖ್ಯವಾಗಿ ಬೆಳಗಾವಿ ಜಿಲ್ಲೆಯಿಂದಲೇ ಹಿಂದಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಚಾಲನೆ ಸಿಕ್ಕಿತ್ತು. ಅಲ್ಲಿನ ಜಿಲ್ಲಾ ಉಸ್ತುವಾರಿಯಾಗಿದ್ದ ರಮೇಶ್‌ ಜಾರಕಿಹೊಳಿ ಅವರೇ ನಂತರ ನೇತೃತ್ವ ವಹಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಇದೀಗ ಅವರು ಅನರ್ಹಗೊಂಡಿದ್ದು, ಉಪಚುನಾವಣೆಯ ನಿರೀಕ್ಷೆಯಲ್ಲಿದ್ದಾರೆ. ಮತ್ತೆ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾದಲ್ಲಿ ಬೆಳಗಾವಿ ಉಸ್ತುವಾರಿ ತಮ್ಮ ಬಳಿ ಇಟ್ಟುಕೊಳ್ಳುವ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಯಾರಿಗೆ?:

ಸದ್ಯ ಬೆಳಗಾವಿ ಜಿಲ್ಲೆಯಿಂದ ಇಬ್ಬರು ಯಡಿಯೂರಪ್ಪ ಸಂಪುಟ ಸೇರ್ಪಡೆಯಾಗಿದ್ದಾರೆ. ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಸಚಿವೆ ಶಶಿಕಲಾ ಜೊಲ್ಲೆ. ಈ ಪೈಕಿ ಜೊಲ್ಲೆ ಅವರು ಮೊದಲ ಬಾರಿಗೆ ಸಚಿವರಾಗಿರುವುದರಿಂದ ಅವರಿಗೆ ಆ ಜಿಲ್ಲೆಯ ಉಸ್ತುವಾರಿ ನೀಡುವ ಸಾಧ್ಯತೆ ಕ್ಷೀಣಿಸಿದೆ. ಉಪಮುಖ್ಯಮಂತ್ರಿಯಾಗಿರುವುದರಿಂದ ಲಕ್ಷ್ಮಣ ಸವದಿ ಅವರಿಗೇ ಜಿಲ್ಲಾ ಉಸ್ತುವಾರಿ ನೀಡುವ ಸಂಭವ ಹೆಚ್ಚಾಗಿದೆ. ಆದರೆ, ಈಗ ಉಸ್ತುವಾರಿ ನೀಡಿ ಮುಂದೆ ರಮೇಶ್‌ ಜಾರಕಿಹೊಳಿ ಅವರು ಸಂಪುಟ ಸೇರಿದ ನಂತರ ಕೇಳಿದರೆ ಬಿಟ್ಟು ಕೊಡಬೇಕೆ ಅಥವಾ ಅವರನ್ನು ಮನವೊಲಿಸಬೇಕೆ ಎಂಬುದು ಇನ್ನೂ ಇತ್ಯರ್ಥವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರು ಕತೆ ಏನು?:  ಇನ್ನು ರಾಜಧಾನಿ ಬೆಂಗಳೂರಿನ ಉಸ್ತುವಾರಿ ಸಂಬಂಧಿಸಿದಂತೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ. ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ಅವರ ಪೈಕಿ ಒಬ್ಬರಿಗೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಉಪಮುಖ್ಯಮಂತ್ರಿ ಹುದ್ದೆ ನೀಡಿರುವುದರಿಂದ ಅಶ್ವತ್ಥನಾರಾಯಣ ಅವರಿಗೇ ಬೆಂಗಳೂರಿನ ಉಸ್ತುವಾರಿ ನೀಡಬೇಕು ಎಂಬ ವಾದ ಬಲವಾಗಿ ಕೇಳಿಬರುತ್ತಿದೆ. ಆದರೆ, ಅಶೋಕ್‌ ಅವರೂ ಈ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಈ ನಡುವೆ ಬೆಂಗಳೂರಿನಲ್ಲೂ ಐವರು ಅನರ್ಹ ಶಾಸಕರಿದ್ದಾರೆ. ಅವರ ಅಭಿಪ್ರಾಯವನ್ನೂ ಕೇಳಬೇಕಾಗಿದೆ. ಇವರೆಲ್ಲರ ಗೊಂದಲ ನಡುವೆ ಬೆಂಗಳೂರು ಉಸ್ತುವಾರಿಯನ್ನು ತಾವೇ ಉಳಿಸಿಕೊಳ್ಳುವ ಬಗ್ಗೆ ಅಥವಾ ಹಿಂದಿನ ಬಿಜೆಪಿ ಸರ್ಕಾರದಲ್ಲಿದ್ದಂತೆ ಎರಡು ವಿಭಾಗಗಳನ್ನಾಗಿ ಮಾಡಿ ಅಶ್ವತ್ಥನಾರಾಯಣ ಹಾಗೂ ಅಶೋಕ್‌ ಅವರ ನಡುವೆ ಹಂಚುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.