ಶ್ರೀನಗರ: ಪೀಪಲ್ ಡೆಮಾಕ್ರಟಿಕ್ ಪಕ್ಷ ಒಡೆಯಲು ಯತ್ನಿಸಿದಲ್ಲಿ, ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಬಿಜೆಪಿಗೆ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿ ಅವರ ಎಚ್ಚರಿಕೆ ಹೊರತಾಗಿಯೂ, ಬಿಜೆಪಿ ಜತೆ ಸೇರಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವುದು ಖಚಿತ ಎಂದು ಪಿಡಿಪಿ ಬಂಡಾಯ ಮುಖಂಡ ಮಜೀದ್ ಪದ್ರೂ ಹೇಳಿದ್ದಾರೆ. 

ಅಲ್ಲದೇ, ಕಾಶ್ಮೀರ(ಪಿಡಿಪಿಯವರೇ)ದವರೊಬ್ಬರೇಸಿಎಂ ಆಗಲಿದ್ದಾರೆ ಎಂದಿದ್ದಾರೆ. ಈ ಮೂಲಕ ಬಿಜೆಪಿ ಜತೆ ಸರ್ಕಾರ ರಚನೆ ಮಾಡಿದರೂ, ‘ಹಿಂದೂ ಮುಖ್ಯಮಂತ್ರಿ’ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪದ್ರೂ ತಿಳಿಸಿದ್ದಾರೆ. ಈ ಬಗ್ಗೆ ಶನಿವಾರ ಮಾತನಾಡಿದ ಪಿಡಿಪಿ ಬಂಡಾಯ ಮುಖಂಡ ಮಜೀದ್ ಪದ್ರೂ, ‘ಬಿಜೆಪಿ ಜತೆಗೂಡಿ ಸರ್ಕಾರ ರಚನೆಗೆ ಅಗತ್ಯವಿರುವಷ್ಟು ಸಂಖ್ಯಾಬಲ ನಮ್ಮ ಬಳಿಯಿದೆ. ಕಾಶ್ಮೀರದ ಮೂಲದವರೊಬ್ಬರು ಮುಖ್ಯಮಂತ್ರಿಯಾಗಲಿ ದ್ದಾರೆ,’ ಎಂದಿದ್ದಾರೆ. 

ಅಲ್ಲದೆ, ಬಿಜೆಪಿ ಜೊತೆಗೂಡಿ ಸರ್ಕಾರ ರಚಿಸಲು ನಮಗೆ ಯಾವುದೇ ಸಮಸ್ಯೆಯಿಲ್ಲ. ಮುಂದಿನ ಚುನಾವಣೆವರೆಗೂ ರಾಜ್ಯಪಾಲರ ಆಡಳಿತ ನಮಗೆ ಬೇಕಿಲ್ಲ ಎಂದು ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜಮ್ಮು-ಕಾಶ್ಮೀರದಲ್ಲಿ ಹಿಂದೂ ಮುಖ್ಯಮಂತ್ರಿ ನೇಮಕ ಮಾಡಲು ಇದು ಸುಸಂದರ್ಭ ಎಂದು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದರು.