ರಾಕೇಶ್‌.ಎನ್‌.ಎಸ್‌.

ನವದೆಹಲಿ [ಆ.29]:  ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನ, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ, ಸುದೀರ್ಘ ಕಾಯುವಿಕೆ ನಂತರ ಮಂತ್ರಿಮಂಡಲ ರಚನೆ ಹಾಗೂ ಖಾತೆ ಹಂಚಿಕೆಗಳ ಹೈಡ್ರಾಮಾ ಬಹುತೇಕ ಮುಕ್ತಾಯ ಕಾಣುತ್ತಿದ್ದಂತೆ ಸಾಂವಿಧಾನಿಕ ಹುದ್ದೆಯಾದ ರಾಜ್ಯಪಾಲರ ನೇಮಕಾತಿ ಕುರಿತ ಕುತೂಹಲ ಗರಿಗೆದರಿದೆ. 2014ರ ಸೆ.1ರಿಂದ ರಾಜ್ಯದ ರಾಜ್ಯಪಾಲರಾಗಿರುವ ವಜೂಭಾಯಿ ವಾಲಾ ಅವರ ಐದು ವರ್ಷಗಳ ಅಧಿಕಾರಾವಧಿ ಇನ್ನು ಮೂರು ದಿನಗಳಲ್ಲಿ, ಅಂದರೆ ಆ.31ರಂದು ಮುಕ್ತಾಯಗೊಳ್ಳಲಿದೆ. ಇನ್ನೊಂದು ಅವಧಿಗೆ ಅವರು ಮುಂದುವರಿಯುವ ಸಾಧ್ಯತೆ ಕಡಿಮೆ ಇದ್ದು, ಹೊಸ ರಾಜ್ಯಪಾಲರು ಯಾರಾಗುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮಾಜಿ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಭಗತ್‌ ಸಿಂಗ್‌ ಕೋಶಿಯಾರಿ, ಉತ್ತರ ಪ್ರದೇಶದ ಮಾಜಿ ಸಂಸದ ಕಲ್‌ರಾಜ್‌ ಮಿಶ್ರಾ, ಬಿಹಾರದ ಮಾಜಿ ಸಂಸದ ಹುಕುಂದೇವ್‌ ನಾರಾಯಣ್‌ ಯಾದವ್‌, ಲೋಕಸಭೆಯ ಮಾಜಿ ಉಪ ಸ್ಪೀಕರ್‌ ಕರಿಯಾ ಮುಂಡಾ ಹಾಗೂ ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಾಂತ ಕುಮಾರ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದ್ದು, ಕೇಂದ್ರ ಸರ್ಕಾರ ಯಾರಿಗೆ ಜವಾಬ್ದಾರಿ ವಹಿಸಲಿದೆ ಎಂಬ ಪ್ರಶ್ನೆಗೆ ಒಂದೆರಡು ದಿನಗಳಲ್ಲಿ ಉತ್ತರ ದೊರಕಲಿದೆ.

ಹೆಚ್ಚುವರಿ ಹೊಣೆ:  ಸದ್ಯದ ಮಟ್ಟಿಗೆ 80ರ ಹರೆಯದ ವಜೂಭಾಯಿ ವಾಲಾ ಅವರ ಅಧಿಕಾರ ಅವಧಿ ವಿಸ್ತರಣೆಯಾಗುವುದು ಕಷ್ಟಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ತಾತ್ಕಾಲಿಕವಾಗಿ ಬೇರೊಂದು ರಾಜ್ಯದ ರಾಜ್ಯಪಾಲರಿಗೆ ಕರ್ನಾಟಕದ ಹೆಚ್ಚುವರಿ ಹೊಣೆ ನೀಡಬಹುದು ಅಥವಾ ಬೇರೊಂದು ರಾಜ್ಯದ ರಾಜ್ಯಪಾಲರನ್ನು ವರ್ಗಾಯಿಸುವ ಸಾಧ್ಯತೆಗಳೇ ಹೆಚ್ಚು ಎಂದು ಹೇಳಲಾಗಿದೆ.

ಅನುಭವಿ ರಾಜಕಾರಣಿಗೆ ಆದ್ಯತೆ:  ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಸೂಕ್ಷ್ಮ ರಾಜಕೀಯ ಸನ್ನಿವೇಶವಿರುವ ಕಾರಣ ಅನುಭವಿ ರಾಜಕಾರಣಿಯೊಬ್ಬರು ರಾಜ್ಯದ ರಾಜ್ಯಪಾಲರಾಗಬಹುದು. ಪ್ರಸ್ತುತ ಸನ್ನಿವೇಶ ಗಮನಿಸಿದರೆ ಬೇರೊಂದು ರಾಜ್ಯದ ರಾಜ್ಯಪಾಲರೊಬ್ಬರಿಗೆ ಕರ್ನಾಟಕದ ಹೆಚ್ಚುವರಿ ಹೊಣೆ ನೀಡುವ ಸಾಧ್ಯತೆಯೇ ದಟ್ಟವಾಗಿದೆ ಎನ್ನಲಾಗುತ್ತಿದ್ದು, ಇನ್ನೆರಡು ದಿನದಲ್ಲಿ ಸ್ಪಷ್ಟಚಿತ್ರಣ ಸಿಗಲಿದೆ.

ಬಿಜೆಪಿಯು ರಾಜಕೀಯ ನೇಮಕಾತಿ ಮತ್ತು ಕೇಂದ್ರ ಸಚಿವ ಸಂಪುಟಕ್ಕೆ ಆಯ್ಕೆ ಹಾಗೂ ಲೋಕಸಭೆಯ ಟಿಕೆಟ್‌ ಹಂಚಿಕೆ ವಿಷಯದಲ್ಲಿ 75 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹುದ್ದೆ ಅಥವಾ ಜವಾಬ್ದಾರಿಯಿಲ್ಲ ಎಂಬ ಅಲಿಖಿತ ನಿಯಮವನ್ನು ರೂಪಿಸಿಕೊಂಡಿದೆ. ಆದರೆ, ರಾಜ್ಯಪಾಲರ ನೇಮಕದಲ್ಲಿ ಈ ನಿಯಮ ಅಷ್ಟೊಂದು ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲ. ಆದ್ದರಿಂದ ವಯೋ ಮಾನದ ಮಾನದಂಡದಲ್ಲಿ ಟಿಕೆಟ್‌ ವಂಚಿತ ಮುಖಂಡರೊಬ್ಬರು ಕರ್ನಾಟಕದ ರಾಜ್ಯಪಾಲರಾಗುವ ಸಾಧ್ಯತೆಯೇ ಹೆಚ್ಚು ಎನ್ನುತ್ತಿವೆ ಕೇಂದ್ರ ಸರ್ಕಾರದ ಮೂಲಗಳು. ಕಳೆದ ಜುಲೈನಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ 83ರ ಹರೆಯದ ಬಿಸ್ವಾ ಭೂಷನ್‌ ಹರಿಚಂದನ್‌ ಅವರನ್ನು ನೇಮಕ ಮಾಡಿದ್ದು ಈ ವಾದಕ್ಕೆ ಪುಷ್ಟಿನೀಡುತ್ತದೆ.

ಪಕ್ಷದ ಹಿರಿಯರಿಗೆ ರಾಜ್ಯಪಾಲರ ಹುದ್ದೆಯ ಉಡುಗೊರೆ ನೀಡದೇ ಮಾಜಿ ಅಧಿಕಾರಿಗಳು, ಬಿಜೆಪಿ ಹಾಗೂ ಸಂಘದ ಪರ ಒಲವು-ನಿಲುವ ಹೊಂದಿರುವ ವ್ಯಕ್ತಿಯೊಬ್ಬರನ್ನು ಕರ್ನಾಟಕಕ್ಕೆ ರಾಜ್ಯಪಾಲರನ್ನಾಗಿಸಬೇಕು ಎಂದು ಕೇಂದ್ರದ ಗೃಹ ಸಚಿವಾಲಯ ನಿರ್ಧರಿಸಿದ್ದೇ ಆದರೆ, ರಾಜ್ಯದ ರಾಜ್ಯಪಾಲರು ಯಾರಾಗಬಹುದು ಎಂದು ಅಂದಾಜಿಸುವುದು ಮಾತ್ರ ಕಷ್ಟ.

ರೇಸಲ್ಲಿ ಯಾರ್ಯಾರು?

1. ಸುಮಿತ್ರಾ ಮಹಾಜನ್‌: ಮಾಜಿ ಲೋಕಸಭಾ ಸ್ಪೀಕರ್‌, ಮಧ್ಯಪ್ರದೇಶ ಮೂಲ

2. ಭಗತ್‌ ಸಿಂಗ್‌ ಕೋಶಿಯಾರಿ: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ

3. ಕಲ್‌ರಾಜ್‌ ಮಿಶ್ರಾ: ಉತ್ತರ ಪ್ರದೇಶದ ಮಾಜಿ ಲೋಕಸಭಾ ಸದಸ್ಯ

4. ಹುಕುಂದೇವ್‌ ಯಾದವ್‌: ಬಿಹಾರ ಮೂಲದ ಮಾಜಿ ಸಂಸತ್‌ ಸದಸ್ಯ

5. ಕರಿಯಾ ಮುಂಡಾ: ಮಾಜಿ ಲೋಕಸಭಾ ಉಪಸ್ಪೀಕರ್‌, ಜಾರ್ಖಂಡ್‌ ಮೂಲ

6. ಶಾಂತ ಕುಮಾರ್‌: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ