ಬೆಂಗಳೂರು :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ತಮಗೆ ಬಿಜೆಪಿ ಟಿಕೆಟ್ ಕೊಡಿಸುವಂತೆ ಡಾ.ಎಲ್.ಜ್ಯೋತಿಷ್ ಕುಮಾರ್ ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಮನವಿ ಮಾಡಿದ್ದಾರೆ. 

ಗಾವಡಗೆರೆಯ ನಟರಾಜ ಸ್ವಾಮೀಜಿ, ಪ್ರಗತಿಪರ ರೈತ ಚಿಕ್ಕಹೆಜ್ಜೂರು ಸೋಮಶೇಖರ್, ಎಚ್.ಡಿ. ಕೋಟೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿದ್ದನಾಯಕ ಅವರೊಂದಿಗೆ ಇಲ್ಲಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅವರು, ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೂಕ್ತ ಪ್ರತಿನಿಧಿಯ ಅಗತ್ಯವಿದ್ದು, ಪಕ್ಷದ ವತಿಯಿಂದ ಟಿಕೆಟ್ ಕೊಡಿಸಿದಲ್ಲಿ ಅನುಕೂಲವಾಗುತ್ತದೆ ಎಂದರು. ಇದಕ್ಕೆ ಪ್ರಸಾದ್ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ಜ್ಯೋತಿಷ್‌ಕುಮಾರ್ ತಿಳಿಸಿದ್ದಾರೆ.

ಕ್ಷೇತ್ರಾದ್ಯಂತ ಪ್ರವಾಸ ಮಾಡುತ್ತಿದ್ದು, ಜನರ ಸಮಸ್ಯೆಗಳನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದೇನೆ. ರಾಜ್ಯ ಬಿಜೆಪಿಯ ಎಲ್ಲಾ ನಾಯಕರನ್ನು ಭೇಟಿ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ. ಕಳೆದೆರಡು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ ಕೆಲವು ತಿಂಗಳುಗಳ ಹಿಂದೆ ಕಾಂಗ್ರೆಸ್ ಸೇರಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ದಿಂದ ಸ್ಪರ್ಧಿಸಿ, ಸೋತಿದ್ದಾರೆ. 

ಹೀಗಾಗಿ ಬಿಜೆಪಿ ಟಿಕೆಟ್‌ಗೆ ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಮಾಜಿ ಸಚಿವ ಹಾಗೂ ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಎಂ. ಶಿವಣ್ಣ, ವಕೀಲರ ಎಸ್. ಅರುಣ್‌ಕುಮಾರ್, ಡಾ. ಜ್ಯೋತಿಷ್ ಕುಮಾರ್ ಸೇರಿದಂತೆ ಕೆಲವರು ಈಗಿನಿಂದಲೇ ಲಾಬಿ ಆರಂಭಿಸಿದ್ದಾರೆ.