ಸೋಮಣ್ಣ ಪುತ್ರಗೆ ಟಿಕೆಟ್‌ ತಪ್ಪಿಸುವ ಪ್ರಯತ್ನ ಶುರು

news | Saturday, March 17th, 2018
Suvarna Web Desk
Highlights

ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್‌ ಸೋಮಣ್ಣ ಅವರಿಗೆ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡುವುದನ್ನು ತಪ್ಪಿಸುವ ಪ್ರಯತ್ನ ಸ್ವಪಕ್ಷೀಯರಿಂದಲೇ ಆರಂಭಗೊಂಡಿದೆ.

ಬೆಂಗಳೂರು : ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ವಿ.ಸೋಮಣ್ಣ ಪುತ್ರ ಡಾ.ಅರುಣ್‌ ಸೋಮಣ್ಣ ಅವರಿಗೆ ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡುವುದನ್ನು ತಪ್ಪಿಸುವ ಪ್ರಯತ್ನ ಸ್ವಪಕ್ಷೀಯರಿಂದಲೇ ಆರಂಭಗೊಂಡಿದೆ.

ಕಳೆದ ವಾರವಷ್ಟೇ ತಮ್ಮ ಪುತ್ರ ಕಣಕ್ಕಿಳಿಯುವ ಬಗ್ಗೆ ಸ್ವತಃ ಸೋಮಣ್ಣ ಅವರೇ ಪ್ರಕಟಿಸಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರೇ ಟಿಕೆಟ್‌ ನೀಡುವ ಭರವಸೆ ನೀಡಿದ್ದಾರೆ ಎಂದೂ ಹೇಳಿದ್ದರು. ಆದರೆ, ಈ ಒಂದು ವಾರದಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿ ಚುನಾವಣೆ ಎದುರಿಸಲು ವೇದಿಕೆ ಸಜ್ಜುಗೊಳಿಸುತ್ತಿರುವ ಮಧ್ಯೆಯೇ ಅಪಸ್ವರ ಕೇಳಿಬಂದಿದೆ. ರಾಜ್ಯ ನಾಯಕರೊಬ್ಬರ ಅಪ್ತರೇ ಅರುಣ್‌ ಅವರಿಗೆ ಟಿಕೆಟ್‌ ಸಿಗದಂತೆ ಪ್ರಯತ್ನ ನಡೆಸುತ್ತಿದ್ದಾರೆ. ‘ಒಂದು ಕೈಯಿಂದ ಕೊಟ್ಟು, ಮತ್ತೊಂದು ಕೈಯಿಂದ ಕಿತ್ತುಕೊಳ್ಳುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಸೋಮಣ್ಣ ಮತ್ತು ಅವರ ಪುತ್ರ ಅರುಣ್‌ ಅವರು ತಮ್ಮ ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹಾಲಿ ವಿಧಾನಪರಿಷತ್‌ ಸದಸ್ಯರಾಗಿರುವ ಸೋಮಣ್ಣ ಅವರು ಈ ಬಾರಿ ಕಣಕ್ಕಿಳಿಯುವ ಉದ್ದೇಶದಿಂದ ಹಲವಾರು ಕ್ಷೇತ್ರಗಳ ಮೇಲೆ ಕಣ್ಣಿರಿಸಿದ್ದರು. ಕಳೆದ ಬಾರಿ ಸೋಲುಂಡಿದ್ದ ಬೆಂಗಳೂರಿನ ಗೋವಿಂದರಾಜನಗರ ಸೇರಿದಂತೆ ಚಾಮರಾಜನಗರದ ಹನೂರು, ಗುಂಡ್ಲುಪೇಟೆ, ತುಮಕೂರಿನ ಗುಬ್ಬಿ ಹಾಗೂ ಹಾಸನದ ಅರಸೀಕೆರೆ ಕ್ಷೇತ್ರಗಳಲ್ಲಿ ಸಂಚರಿಸಿ ಮಾಹಿತಿ ಸಂಗ್ರಹಿಸಿದ್ದರು. ಸೋಮಣ್ಣ ಅವರು ತಾವು ಕಣಕ್ಕಿಳಿಯುವುದರ ಜತೆಗೆ ತಮ್ಮ ಪುತ್ರನನ್ನು ಚುನಾವಣಾ ರಾಜಕೀಯಕ್ಕೆ ತರುವ ಉದ್ದೇಶವನ್ನು ಹೊಂದಿದ್ದರು. ಮೊದಲ ಹಂತವಾಗಿ ಪುತ್ರ ಅರುಣ್‌ ಅವರನ್ನು ಪಕ್ಷದ ರಾಜ್ಯ ಯುವಮೋರ್ಚಾ ಉಪಾಧ್ಯಕ್ಷರನ್ನಾಗಿ ಮಾಡುವಲ್ಲಿ ಸಫಲರಾದರು. ಆದರೆ, ಟಿಕೆಟ್‌ ಹಂಚಿಕೆ ವಿಷಯ ಬಂದಾಗ ಹಾಲಿ ವಿಧಾನಪರಿಷತ್‌ ಸದಸ್ಯರಾಗಿರುವುದರಿಂದ ಇಬ್ಬರಿಗೂ ಟಿಕೆಟ್‌ ನೀಡುವುದು ಕಷ್ಟ. ಇಬ್ಬರ ಪೈಕಿ ಒಬ್ಬರಿಗೆ ಟಿಕೆಟ್‌ ನೀಡಲು ಅಡ್ಡಿಯಿಲ್ಲ ಎಂಬ ಸಂದೇಶವನ್ನು ಪಕ್ಷದ ನಾಯಕರು ಸೋಮಣ್ಣ ಅವರಿಗೆ ರವಾನಿಸಿದರು.

ತಾವು ಸಕ್ರಿಯರಾಗಿರುವ ವೇಳೆಯೇ ಪುತ್ರನನ್ನೂ ರಾಜಕೀಯಕ್ಕೆ ತರಬೇಕು ಎಂಬ ನಿಲವಿಗೆ ಬಂದ ಅವರು ಸಾಕಷ್ಟುಲೆಕ್ಕಾಚಾರ ಹಾಕಿದ ನಂತರ ಅರಸೀಕೆರೆ ಕ್ಷೇತ್ರದಿಂದ ಪುತ್ರನಿಗೆ ಟಿಕೆಟ್‌ ಕೊಡಿಸುವ ಪ್ರಯತ್ನಕ್ಕೆ ಮುಂದಾದರು. ಇದಕ್ಕೆ ಯಡಿಯೂರಪ್ಪ ಅವರು ಅಸ್ತು ಎಂದರು. ಅವರ ಒಪ್ಪಿಗೆ ನಂತರವೇ ಅರಸೀಕೆರೆ ಕ್ಷೇತ್ರಕ್ಕೆ ತೆರಳಿ ಸಿದ್ಧತೆ ಆರಂಭಿಸಿದ್ದ ಸೋಮಣ್ಣ ಮತ್ತವರ ಪುತ್ರನಿಗೆ ಅಸಹಕಾರದ ಪ್ರತಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ಬೇರೊಬ್ಬರು ಯಡಿಯೂರಪ್ಪ ಅವರ ಹೆಸರು ಹೇಳಿಕೊಂಡು ತಾವೂ ಕಣಕ್ಕಿಳಿಯುವ ಆಸಕ್ತಿ ಹೊಂದಿರುವುದಾಗಿ ಕ್ಷೇತ್ರದಲ್ಲಿ ಹೇಳಿಕೊಂಡು ಬರತೊಡಗಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಯಿಂದ ಬೇಸರಗೊಂಡಿರುವ ಸೋಮಣ್ಣ ಅವರು ಪಕ್ಷದ ರಾಜ್ಯ ನಾಯಕರ ಬಳಿ ನಡೆದಿರುವ ಬೆಳವಣಿಗೆಗಳನ್ನು ವಿವರಿಸಿದ್ದಾರೆ. ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಯಾವ ನಿಲುವು ಕೈಗೊಳ್ಳುತ್ತಾರೆ? ಆಕಾಂಕ್ಷಿಯಾಗಿರುವ ಇತರ ಮುಖಂಡರನ್ನು ಕರೆಸಿ ಸೂಚನೆ ನೀಡುವ ಮೂಲಕ ಅರುಣ್‌ ಸೋಮಣ್ಣ ಅವರ ಸ್ಪರ್ಧೆಗೆ ಹಾದಿ ಸುಗಮಗೊಳಿಸುತ್ತಾರಾ ಎಂಬುದು ಕುತೂಹಲಕರವಾಗಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk