ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕೆಂಬ ಬಗ್ಗೆ ಹೈ ಕಮಾಂಡ್ ದ್ವಂದ್ವದಲ್ಲಿದ್ದು ಬೆಂಗಳೂರಿನಿಂದ ವಾಪಸ್ಸಾಗಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ದೆಹಲಿಯಲ್ಲಿ ಎರಡು ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರೂ ಕೂಡ ಇಲ್ಲಿಯವರೆಗೆ ಯಾರನ್ನು ಅಧ್ಯಕ್ಷ ರನ್ನಾಗಿ ಮಾಡಬೇಕು ಎಂಬುದು ಸ್ಪಷ್ಟವಾಗಿಲ್ಲ.
ಬೆಂಗಳೂರು (ಮೇ.18): ಕೆಪಿಸಿಸಿ ಅಧ್ಯಕ್ಷರನ್ನಾಗಿ ಯಾರನ್ನು ನೇಮಿಸಬೇಕೆಂಬ ಬಗ್ಗೆ ಹೈ ಕಮಾಂಡ್ ದ್ವಂದ್ವದಲ್ಲಿದ್ದು ಬೆಂಗಳೂರಿನಿಂದ ವಾಪಸ್ಸಾಗಿ ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ದೆಹಲಿಯಲ್ಲಿ ಎರಡು ಬಾರಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರೂ ಕೂಡ ಇಲ್ಲಿಯವರೆಗೆ ಯಾರನ್ನು ಅಧ್ಯಕ್ಷ ರನ್ನಾಗಿ ಮಾಡಬೇಕು ಎಂಬುದು ಸ್ಪಷ್ಟವಾಗಿಲ್ಲ.
ವೇಣುಗೋಪಾಲ್ ಬೆಂಗಳೂರಿಗೆ ಹೋಗುವವರೆಗೆ ಕೂಡ ಡಿ.ಕೆ ಶಿವಕುಮಾರ ಮತ್ತು ಎಂ.ಬಿ ಪಾಟೀಲ್ ಇಬ್ಬರಲ್ಲಿ ಒಬ್ಬರು ಅಧ್ಯಕ್ಷರಾಗಬಹುದು ಎಂಬ ಸ್ಥಿತಿಯಿತ್ತು ಆದರೆ ಟೀಮ್ ವೇಣುಗೋಪಾಲ್ ರಾಜ್ಯ ಭೇಟಿಯ ನಂತರ ಹೈ ಕಮಾಂಡ್ ಅಸ್ಪಷ್ಟತೆಯಲ್ಲಿದ್ದು ಕೆ.ಎಚ್ ಮುನಿಯಪ್ಪ ಮತ್ತು ಎಸ್.ಆರ್ ಪಾಟೀಲ್ ಹೆಸರುಗಳು ಮತ್ತೆ ದೆಹಲಿ ಅಂಗಳದಲ್ಲಿ ಪ್ರಬಲವಾಗಿ ಕೇಳಲಾರಂಭಿಸಿವೆ.
ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೂಡ ಓಡುತ್ತಿದೆಯೆಂದು ಹೇಳಲಾಗುತ್ತಿದೆ. ಸ್ವತಃ ಖರ್ಗೆ ಅವರೇ ಹೈ ಕಮಾಂಡ್ ನಾಯಕರಿಗೆ ನನಗೆ ಮನಸ್ಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಯುವ ಮುಖಗಳನ್ನು ಪ್ರೊಜೆಕ್ಟ್ ಮಾಡಲು ಹೊರಟಿರುವ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕನ ಸ್ಥಾನಕ್ಕೆ ಜ್ಯೋತಿರಾದಿತ್ಯ ಸಿಂಧಿಯಾರನ್ನು ತರಲು ಯೋಚಿಸುತ್ತಿದ್ದು ಇದಕ್ಕಾಗಿ ಖರ್ಗೆ ಅವರನ್ನು ರಾಜ್ಯಕ್ಕೆ ಮರಳಿ ಕಳಿಸುವ ಬಗ್ಗೆ ಯೋಚಿಸುತ್ತಿದ್ದು ಆದರೆ ಸಿದ್ಧರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುವ ಸಮಯದಲ್ಲಿ ನಾನೇಕೆ ಹೋಗಿ ಅಧ್ಯಕ್ಷನ ಚಾಕರಿ ಮಾಡಬೇಕು ಎಂದು ಸ್ಪಷ್ಟವಾಗಿ ಕೇಳಿದ್ದಾರೆ ಎನ್ನಲಾಗಿದೆ.ಆದರೆ ಬಹಿರಂಗವಾಗಿ ಮಾತ್ರ ಖರ್ಗೆ ಪಕ್ಷ ಕೊಟ್ಟಿದ್ದನ್ನು ನಾನು ಯಾವತ್ತಿಗೂ ಜವಾಬ್ದಾರಿ ಹೊರಲು ಸಿದ್ಧ ಎನ್ನುತ್ತಿದ್ದಾರೆ .
ಡಿ.ಕೆ ಶಿವಕುಮಾರ್ ಮತ್ತು ಎಂ.ಬಿ ಪಾಟೀಲ್ ಇಬ್ಬರಿಗೂ ಕೂಡ ದೆಹಲಿಯಲ್ಲಿ ಪ್ರಬಲ ಲಿಂಕ್ ಇದ್ದು ಅದನ್ನು ಉಪಯೋಗಿಸಿಕೊಂಡು ಅಧ್ಯಕ್ಷರಾಗಲು ಲಾಬಿ ನಡೆಸುತ್ತಿದ್ದಾರೆ.ಕೆ ಎಚ್ ಮುನಿಯಪ್ಪ ದಲಿತ ಎಡಗೈ ಕಾರ್ಡ್ ಆಡುತ್ತಿದ್ದು 70 ವರ್ಷಗಳಲ್ಲಿ ದಲಿತ ಎಡ ಗೈ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಸೋನಿಯಾ ಮತ್ತು ರಾಹುಲ್'ರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ.
ಇನ್ನು ಅಧ್ಯಕ್ಷರಾಗುವುದಕ್ಕಾಗಿಯೇ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕುಳಿತಿರುವ ಎಸ್.ಆರ್ ಪಾಟೀಲ್'ರ ಪರವಾಗಿ ಸ್ವತಃ ಮುಖ್ಯಮಂತ್ರಿಗಳೇ ಲಾಬಿ ಮಾಡುತ್ತಿದ್ದು ಆದರೆ ಮುಖ್ಯಮಂತ್ರಿ ಮಾತು ಕೇಳುವ ಅಧ್ಯಕ್ಷ ಬೇಕೋ ಇಲ್ಲವೇ ಸ್ವಲ್ಪ ಮಟ್ಟಿಗೆ ಸಿದ್ದುರನ್ನು ಎದುರು ಹಾಕಿಕೊಂಡು ಕೆಲಸ ಮಾಡುವವರು ಬೇಕೋ ಎಂಬ ಬಗ್ಗೆ ರಾಹುಲ್ ಗಾಂಧಿ ಮತ್ತು ವೇಣುಗೋಪಾಲ್ ಇನ್ನು ಕೂಡ ನಿರ್ಣಯ ತೆಗೆದುಕೊಳ್ಳಬೇಕಿದೆ
