Asianet Suvarna News Asianet Suvarna News

ಸಬರ್ಬನ್ ರೈಲು ಉದ್ಘಾಟನೆಗೆ ಕ್ಷಣಗಣನೆ ಆರಂಭ

ವೈಟ್‌'ಫೀಲ್ಡ್‌'ನಿಂದ ಸಾಕಷ್ಟು ಪ್ರಯಾಣಿಕರು ಡೆಮು ಬಳಸಿ ಬೈಯ್ಯಪ್ಪನಹಳ್ಳಿ ತಲುಪಿದಲ್ಲಿ ಅಲ್ಲಿಂದ ಮೆಟ್ರೋ ಮೂಲಕ ಬೆಂಗಳೂರು ನಗರದ ವಿವಿಧ ಭಾಗಗಳನ್ನು ತಲುಪಲು ಅವಕಾಶವಾಗಲಿದೆ.

Whitefield to Baiyappanahalli Suburban Train Inauguration today

ಬೆಂಗಳೂರು(ಆ.18): ಬೆಂಗಳೂರು ಉಪನಗರ ರೈಲು (ಸಬ್ ಅರ್ಬನ್ ರೈಲು) ಯೋಜನೆಯ ಮೊದಲ ಹೆಜ್ಜೆ ಎಂಬಂತೆ ಇಂದಿನಿಂದ ಬೈಯ್ಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್ ನಡುವೆ ಡೆಮು ರೈಲು ಸಂಚಾರ ಆರಂ‘ಗೊಳ್ಳಲಿದೆ. ರೈಲ್ವೆ ಸಚಿವ ಸುರೇಶ್‌ಪ್ರಭು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯಿಂದಲೇ ಡೆಮು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ. ಆದರೆ ಡೆಮು ರೈಲು ಬೆಳಗ್ಗೆ ಮತ್ತು ಸಂಜೆ ಒಂದೇ ಬಾರಿ ಸಂಚರಿಸುತ್ತಿರುವುದು ಈ ಭಾಗದ ರೈಲ್ವೇ ಪ್ರಯಾಣಿಕರಲ್ಲಿ ಸಾಕಷ್ಟು ನಿರಾಶೆಗೆ ಕಾರಣವಾಗಿದೆ.

ಬೆಂಗಳೂರು ನಗರದ ಬಹುಪಾಲು ಐಟಿ-ಬಿಟಿ ಕಂಪನಿಗಳನ್ನು ಹೊಂದಿರುವ ಇಲೆಕ್ಟ್ರಾನಿಕ್ ಸಿಟಿ-ವೈಟ್‌'ಫೀಲ್ಡ್ ಮೊದಲಾದ ಭಾಗದಲ್ಲಿ ಸಂಚಾರ ದಟ್ಟಣೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಇದೀಗ ನಮ್ಮ ಮೆಟ್ರೋ ಕಾಮಗಾರಿ ಕೂಡ (ಬೈಯ್ಯಪ್ಪನಹಳ್ಳಿ-ವೈಟ್ ಫೀಲ್ಡ್) ಈ ಭಾಗದಲ್ಲಿ ಆರಂಭಗೊಂಡಿದ್ದು, ಇಲ್ಲಿನ ರಸ್ತೆ ಪ್ರಯಾಣವನ್ನು ಇನ್ನಷ್ಟು ದುಸ್ತರವಾಗಿಸಿದೆ. ಹೀಗಾಗಿ ಹೊಸದಾಗಿ ಡೆಮು ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದ್ದರೂ ಡೆಮು ರೈಲು ಬೆಳಗ್ಗೆ ಮತ್ತು ಸಂಜೆ ಒಂದೇ ಬಾರಿ ಸಂಚರಿಸುತ್ತಿರುವುದರಿಂದ ಜನರು ಭ್ರಮನಿರಸನಗೊಂಡಿದ್ದಾರೆ. ಇನ್ನೂ ಹೆಚ್ಚು ಬಾರಿ ಡೆಮು ಸೇವೆ ಒದಗಿಸಬಹುದಾಗಿದ್ದರೂ ಕೂಡ ಕೇವಲ ಒಂದೇ ಟ್ರೀಪ್‌'ಗೆ ಸೀಮಿತಗೊಳಿಸಿರುವುದನ್ನು ಆಕ್ಷೇಪಿಸಿದ್ದಾರೆ.

ದಿನಕ್ಕೊಂದೇ ಬಾರಿ: ಬೈಯ್ಯಪ್ಪನಹಳ್ಳಿ ಮತ್ತು ವೈಟ್‌'ಫೀಲ್ಡ್ ನಡುವೆ ಡೆಮು ರೈಲು ಬೆಳಗ್ಗೆ 8.25 ಮತ್ತು ಸಂಜೆ 6.15ಕ್ಕೆ ಮಾತ್ರ ಸಂಚಾರ ನಡೆಸಲಿದೆ. ಬೆಳಗ್ಗೆ 8.25ಕ್ಕೆ ಬೈಯ್ಯಪ್ಪನಹಳ್ಳಿಯಿಂದ ಹೊರಡುವ ರೈಲು 8.50ಕ್ಕೆ ವೈಟ್‌ಫೀಲ್ಡ್ ತಲುಪಲಿದೆ. ಸಂಜೆ 6.15ಕ್ಕೆ ವೈಟ್‌ಫೀಲ್ಡ್ ಬಿಡುವ ಇದೇ ರೈಲು 6.40ಕ್ಕೆ ಬೈಯ್ಯಪ್ಪನಹಳ್ಳಿ ತಲುಪಲಿದೆ. ಆದರೆ ಈ ರೈಲು ದಿನವಿಡೀ ವೈಟ್‌'ಫೀಲ್ಡ್‌'ನಲ್ಲಿ ರೈಲು ನಿಲುಗಡೆ ಆಗಲಿದ್ದು, ಈ ಅವಧಿಯಲ್ಲಿ ಸಂಚಾರ ನಡೆಸಿದರೆ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವೈಟ್‌'ಫೀಲ್ಡ್‌'ನಿಂದ ಸಾಕಷ್ಟು ಪ್ರಯಾಣಿಕರು ಡೆಮು ಬಳಸಿ ಬೈಯ್ಯಪ್ಪನಹಳ್ಳಿ ತಲುಪಿದಲ್ಲಿ ಅಲ್ಲಿಂದ ಮೆಟ್ರೋ ಮೂಲಕ ಬೆಂಗಳೂರು ನಗರದ ವಿವಿಧ ಭಾಗಗಳನ್ನು ತಲುಪಲು ಅವಕಾಶವಾಗಲಿದೆ. ಬೈಯ್ಯಪ್ಪನಹಳ್ಳಿ- ವೈಟ್ ಫೀಲ್ಡ್ ನಡುವಿನ ಸಂಚಾರಕ್ಕೆ ನಿಗದಿ ಮಾಡಲಾಗಿದ್ದು, ಮಾಸಿಕ ಪಾಸ್ ದರ 175 ಇದೆ. ಮಾಸಿಕ ಪಾಸ್ ಖರೀದಿಸಿ ದಿನದಲ್ಲಿ ಎಷ್ಟು ಬಾರಿ ಆದರೂ ಪ್ರಯಾಣಿಸುವ ಅವಕಾಶವಿದ್ದು ವೈಟ್‌'ಫೀಲ್ಡ್‌ನಿಂದ ಬರುವ ಸಾವಿರಾರು ಪ್ರಯಾಣಿಕರು ಇದರ ಲಾಭ ಪಡೆಯಬಹುದಾಗಿದೆ. ಕೃಷ್ಣರಾಜಪುರಂ (ಕೆ. ಆರ್.ಪುರ) ಮತ್ತು ಹೂಡಿ ಎರಡೂ ನಿಲ್ದಾಣಗಳಲ್ಲಿ ಡೆಮು ರೈಲು ನಿಲುಗಡೆ ಇದೆ.

ಮೆಟ್ರೋ ಮೇಲೆ ಒತ್ತಡ: ಬೈಯ್ಯಪ್ಪನಹಳ್ಳಿ ರೈಲ್ವೇ ನಿಲ್ದಾಣ ಮತ್ತು ವೆುಟ್ರೋ ನಿಲ್ದಾಣಗಳು ಹತ್ತಿರದಲ್ಲೇ ಇರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಡೆಮು ರೈಲಿನಲ್ಲಿ ಒಟ್ಟು 2412(ಸ್ಟಾಂಡಿಂಗ್ ಮತ್ತು ಸಿಟ್ಟಿಂಗ್) ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ. ಡೆಮುನಲ್ಲಿ ಬರುವ ಅರ್ಧದಷ್ಟು ಪ್ರಯಾಣಿಕರು ಬೆಂಗಳೂರು ನಗರದ ಕಡೆಗೆ ಪ್ರಯಾಣಿಸಲು ಮೆಟ್ರೋ ಬಳಕೆ ಮಾಡಿದರೆ ಬೈಯ್ಯಪ್ಪನಹಳ್ಳಿ ನಂತರ ಬರುವ ನಿಲ್ದಾಣಗಳಲ್ಲಿ ಕಾದಿರುವ ಮೆಟ್ರೋ ಪ್ರಯಾಣಿಕರು ರೈಲು ಹತ್ತಲೂ ಅಸಾಧ್ಯವೆನಿಸುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಡೆಮು ರೈಲು ಬೆಳಗ್ಗೆ ಬೈಯ್ಯಪ್ಪನಹಳ್ಳಿ ಬಿಡುವ ಮತ್ತು ಸಂಜೆ ಬೈಯ್ಯಪ್ಪನಹಳ್ಳಿ ತಲುಪುವ ಸಮಯದಲ್ಲಿ ಮೆಟ್ರೋ ರೈಲುಗಳ ಸಂಚಾರದ ನಡುವಿನ ಅಂತರವನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಲಿದೆ.

Follow Us:
Download App:
  • android
  • ios