ನವದೆಹಲಿ(ಸೆ. 21): ಕಾವೇರಿ ಸೀಮೆ ಜನಪ್ರತಿನಿಧಿಗಳು ಖಡಕ್ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ. ಇಂದು ಸಂಸತ್ ಭವನದ ಎದುರು ಕಾವೇರಿ ವಿಚಾರವಾಗಿ ಧರಣಿ ನಡೆಸುತ್ತಿರುವ ಮೈಸೂರಿನ ವಿಶ್ವನಾಥ್ ಅವರು ಈ ವೇಳೆ ಸುವರ್ಣನ್ಯೂಸ್ ಜೊತೆ ಮಾತನಾಡತ್ತಾ ಪ್ರತಾಪ್ ಸಿಂಹ ಮೊದಲಾದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಪ್ರತಾಪ್ ಸಿಂಹ ಎಲ್ಲಿದ್ದಾರೆ? ಪುಸ್ತಕ ಗಿಸ್ತಕ ಬರೆದುಕೊಂಡಿದ್ದಾರೋ ಗೊತ್ತಿಲ್ಲ. ಅವರು ಅಂಕಣ ಬರೆಯುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ?" ಎಂದು ಹೆಚ್.ವಿಶ್ವನಾಥ್ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಕಾವೇರಿ ಕೊಳ್ಳ ಭಾಗದ ಸಂಸದರಾದ ಧೃವನಾರಾಯಣ್, ಪ್ರತಾಪ್ ಸಿಂಹ ಹಾಗೂ ಹೆಚ್.ಡಿ.ದೇವೇಗೌಡರು ರಾಜೀನಾಮೆ ನೀಡಬೇಕು ಎಂದೂ ವಿಶ್ವನಾಥ್ ಆಗ್ರಹಿಸಿದ್ದಾರೆ.

ಕಾವೇರಿ ವಿಚಾರದಲ್ಲಿ ಮೌನವಾಗಿರುವ ನರೇಂದ್ರ ಮೋದಿಯವರನ್ನು ಟೀಕಿಸಿದ ವಿಶ್ವನಾಥ್, "ಕರ್ನಾಟಕಕ್ಕೆ ನೀರು ಬೇಕೆಂದು ಯಾರನ್ನು ಕೇಳೋಣ? ಉಗಾಂಡದ ಅಧ್ಯಕ್ಷರನ್ನು ಕೇಳಲೇ? ಪ್ರಧಾನಿ ಮೋದಿಯವರನ್ನು ನಾವು ಕೇಳಬೇಕಲ್ಲವೇ.! ಇದೇನಾ ಅಚ್ಛೇ ದಿನ್ ಮೋದಿಯವರೇ?" ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.

ಸರ್ವಪಕ್ಷದ ಸಭೆಗೆ ಬಿಜೆಪಿ ಬರೋದಿಲ್ಲವೆಂದು ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ವಿಶ್ವನಾಥ್, ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. "ಅಖಂಡ ಕರ್ನಾಟಕದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ಸಭೆಗೆ ಬರೋದಿಲ್ಲವೆಂದು ಬಿಜೆಪಿ ಹೇಳೋದು ಸರಿಯಲ್ಲ" ಎಂದು ವಿಶ್ವನಾಥ್ ಹೇಳಿದ್ದಾರೆ.