ಹೋದಲ್ಲಿ ಬಂದಲ್ಲಿ ‘ಮಿಷನ್-150’ ಎನ್ನುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಈ ಮಾತನ್ನೇ ಹೇಳುತ್ತಿಲ್ಲ. ಬಹುಶಃ ಅವರಿಗೂ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಮನದಟ್ಟಾಗಿರಬಹುದು. -ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಗೇಲಿ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಂಗಳೂರು (ಜು.07): ಹೋದಲ್ಲಿ ಬಂದಲ್ಲಿ ‘ಮಿಷನ್-150’ ಎನ್ನುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಈ ಮಾತನ್ನೇ ಹೇಳುತ್ತಿಲ್ಲ. ಬಹುಶಃ ಅವರಿಗೂ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದು ಮನದಟ್ಟಾಗಿರಬಹುದು. -ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಗೇಲಿ ಮಾಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ.
ಜಲಮಂಡಳಿ ವತಿಯಿಂದ ಏರ್ಪಡಿಸಿದ್ದ ಎಸ್‌ಟಿಪಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಯಡಿಯೂರಪ್ಪ ಮಾತೆತ್ತಿದ್ದರೆ ‘ಮಿಷನ್-150’ ಎನ್ನುತ್ತಿದ್ದರು. ಆದರೆ, ಅವರ ಧ್ವನಿ ನಿಧಾನವಾಗಿ ಕ್ಷೀಣಿಸುತ್ತಿದೆ. ರಾಜ್ಯ ಸರ್ಕಾರ ಕೈಗೊಳ್ಳುವ ಅಭಿವೃದ್ಧಿ ಕಾರ್ಯದಿಂದ ಬಿಜೆಪಿಗೆ ಆತಂಕ ಶುರುವಾಗಿರುವುದು ಈ ಮೂಲಕ ಪ್ರಕಟಗೊಳ್ಳುತ್ತಿದೆ ಎಂದು ಹೇಳಿದರು.
ಯಡಿಯೂರಪ್ಪಗೆ ಗೊತ್ತಿಲ್ಲ:
ಚುನಾವಣೆ ಸಮೀಪಿಸುತ್ತಿದ್ದಂತೆ ‘ಬಿಜೆಪಿ ನಡಿಗೆ ಸ್ಲಂಗಳ ಕಡೆಗೆ’ ಎಂಬ ಹೋರಾಟ ಪ್ರಾರಂಭಿಸಿರುವ ಯಡಿಯೂರಪ್ಪ, ಇವತ್ತಿನವರೆಗೂ ಕೊಳಗೇರಿಗಳನ್ನೇ ನೋಡಿಲ್ಲದ ರೀತಿ ವರ್ತಿಸುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಏನೇನೂ ಮಾಡದವರು ಈಗ ಕೊಳಗೇರಿಗಳತ್ತ ಗಮನ ಹರಿಸಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಕೊಳಗೇರಿಗಳ ಪ್ರತಿ ಮನೆಗೆ 10 ಸಾವಿರ ಲೀ. ಉಚಿತ ಕುಡಿಯುವ ನೀರು, ಹಿಂದಿನ ಎಲ್ಲಾ ಬಾಕಿ ಮೊತ್ತವನ್ನು ಮನ್ನಾ ಮಾಡಿರುವ ವಿಚಾರ ಯಡಿಯೂರಪ್ಪ ಅವರಿಗೆ ಗೊತ್ತಿಲ್ಲ ಅನಿಸುತ್ತೆ ಎಂದು ಟೀಕಿಸಿದರು. ದಲಿತರ ಮನೆ ಊಟದ ಕುರಿತು ಮತ್ತೊಮ್ಮೆ ಕುಹಕವಾಡಿದ ಮುಖ್ಯಮಂತ್ರಿಗಳು, ಹೋಟೆಲ್ ತಿಂಡಿ ತರಿಸಿ ದಲಿತರ ಮನೆಯಲ್ಲಿ ತಿನ್ನುವ ಬದಲಾಗಿ ಬಿಜೆಪಿಯವರಿಗೆ ಹರಿಜನರ ಬಗ್ಗೆ ಪ್ರೀತಿ, ಕಾಳಜಿ ಇದ್ದಲ್ಲಿ ಪರಿಶಿಷ್ಟ ಜಾತಿ ಮನೆಯ ಗಂಡು ಮಕ್ಕಳಿಗೆ ಅವರ ಮನೆಯ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಲಿ. ಇದನ್ನೇ ಬಸವಣ್ಣನವರು ಹೇಳಿರುವುದು ಎಂದು ಸವಾಲೆಸೆದರು.
