ಇಷ್ಟು ದೊಡ್ಡ ಪ್ರಮಾಣದಲ್ಲಿ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ಮಾಡಲು ದಿಢೀರ್ ನಿರ್ಧರಿಸಲು ಸಾಧ್ಯವಿಲ್ಲ. ಹಲವು ತಿಂಗಳಿನಿಂದ ಇದರ ಯೋಜನೆ ನಡೆದಿದ್ದಿರಬಹುದು. ಈಗ ಸರಿಯಾದ ಸಂದರ್ಭ ಬಂದಿದ್ದರಿಂದ ದಿಢೀರ್ ದಾಳಿ ನಡೆದಿರಬಹುದು ಎಂಬುದು ನಿವೃತ್ತ ಐಟಿ ಅಧಿಕಾರಿಗಳ ಅಭಿಪ್ರಾಯ.

ಬೆಂಗಳೂರು(ಆ. 02): ಡಿಕೆಶಿ ಮೇಲೆ ಐಟಿ ದಾಳಿ ನಡೆದ ವಿಚಾರ ಈಗ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ. ಐಟಿ ದಾಳಿಯಾಗುವುದು ಸಹಜ. ಆದರೆ, ಯಾವ ಸಂದರ್ಭದಲ್ಲಿ ಆಗಿದೆ ಎಂಬುದು ಪ್ರಶ್ನೆ. ಬಿಜೆಪಿಯಿಂದ ಅಧಿಕಾರ ದುರುಪಯೋಗ ಆಗುತ್ತಿದೆ ಎಂಬುದು ಕಾಂಗ್ರೆಸ್ಸಿಗರ ವಾದ. ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಆತಿಥ್ಯ ನೀಡಿದ ಕಾರಣಕ್ಕೆ ಡಿಕೆ ಶಿವಕುಮಾರ್ ಮೇಲೆ ಕೇಂದ್ರ ಸರಕಾರ ಟಾರ್ಗೆಟ್ ಮಾಡಿದೆ ಎಂಬುದು ಆ ಪಕ್ಷದ ಆರೋಪ. ಆದರೆ, ಆದಾಯ ತೆರಿಗೆ ಇಲಾಖೆಯ ಪರಿಣತರು ಈ ವಿಚಾರದಲ್ಲಿ ಏನಂತಾರೆ?

ಸುಮ್ಮಸುಮ್ಮನೆ ರೇಡ್ ಸಾಧ್ಯವಿಲ್ಲ:
ಆದಾಯ ತೆರಿಗೆ ಇಲಾಖೆಯ ರೇಡ್'ಗೆ ಅದರದ್ದೇ ನಿಯಮಗಳಿವೆ. ಡಿಕೆಶಿ ಮನೆ ಮೇಲೆ ಯಾವುದೇ ಪೂರ್ವಯೋಜನೆಯಿಲ್ಲದೇ ಐಟಿ ದಾಳಿ ನಡೆಸಲು ಸಾಧ್ಯವಿಲ್ಲ. ದಾಳಿಗೆ ಯಾವುದೋ ಪ್ರಬಲ ಕಾರಣವಿರುತ್ತದೆ ಎಂಬುದು ನಿವೃತ್ತ ಐಟಿ ಅಧಿಕಾರಿ ಸುಭಾಷ್ ಕೊರಂಗ್ರಪಾಡಿ ಅಭಿಪ್ರಾಯಪಟ್ಟಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ನಿವೃತ್ತ ಅಧಿಕಾರಿಗಳು, ಐಟಿ ದಾಳಿಯ ಹಿಂದಿನ ಕೆಲ ಸೂಕ್ಷ್ಮ ವಿಷಯಗಳನ್ನು ಹಂಚಿಕೊಂಡರು.

"ಇಂಥವರ ಹತ್ತಿರ 1 ಕೋಟಿ ಇದೆ ಎಂದು ಮಾಹಿತಿ ಕೊಟ್ಟಾಕ್ಷಣ ನಾವು ದಾಳಿ ಮಾಡಲು ಸಾಧ್ಯವಿಲ್ಲ. ಅಷ್ಟು ಹಣ ಹೇಗೆ ಬಂತು, ಯಾವ ರೂಪದಲ್ಲಿ ಬಂತು ಇತ್ಯಾದಿ ಮಾಹಿತಿ ಇರಬೇಕು. ವ್ಯಕ್ತಿಯೊಬ್ಬರ ಪ್ರೈವೆಸಿಗೆ ಸುಮ್ಮಸುಮ್ಮನೆ ತೊಂದರೆ ಕೊಟ್ಟರೆ ಅದರ ಪರಿಣಾಮವನ್ನು ಐಟಿ ಇಲಾಖೆಯೇ ಎದುರಿಸಬೇಕಾಗುತ್ತದೆ. ಹೀಗಾಗಿ ಬಲವಾದ ಕಾರಣವಿಲ್ಲದೇ ಇಲಾಖೆಯು ದಾಳಿ ಮಾಡುವುದಿಲ್ಲ" ಎಂದು ಸುಭಾಷ್ ಕೊರಂಗ್ರಪಾಡಿ ಸ್ಪಷ್ಟಪಡಿಸಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ ಮಾಡಲು ದಿಢೀರ್ ನಿರ್ಧರಿಸಲು ಸಾಧ್ಯವಿಲ್ಲ. ಹಲವು ತಿಂಗಳಿನಿಂದ ಇದರ ಯೋಜನೆ ನಡೆದಿದ್ದಿರಬಹುದು. ಈಗ ಸರಿಯಾದ ಸಂದರ್ಭ ಬಂದಿದ್ದರಿಂದ ದಿಢೀರ್ ದಾಳಿ ನಡೆದಿರಬಹುದು ಎಂಬುದು ನಿವೃತ್ತ ಐಟಿ ಅಧಿಕಾರಿಗಳ ಅಭಿಪ್ರಾಯ.

ಎಲ್ಲಿದೆ ಕಂಪ್ಲೇಂಟ್? ರಮೇಶ್ ಕುಮಾರ್ ವ್ಯಗ್ರ:
ಡಿಕೆ ಶಿವಕುಮಾರ್ ವಿರುದ್ಧ ಪ್ರಬಲ ಸಾಕ್ಷ್ಯವಿದ್ದುದ್ದರಿಂದ ದಿಢೀರ್ ಐಟಿ ದಾಳಿ ನಡೆದಿರುವ ಸಾಧ್ಯತೆಯನ್ನು ಸಚಿವ ರಮೇಶ್ ತಳ್ಳಿಹಾಕಿದ್ದಾರೆ. ಡಿಕೆಶಿ ವಿರುದ್ಧ ಯಾರು ದೂರು ಕೊಟ್ಟಿದ್ದಾರೆ? ಸಮರ್ಥನೆ ಮಾಡಿಕೊಳ್ಳಲು ಇಂತಹ ಸಾವಿರಾರು ಸಬೂಬು ಹೇಳಬಹುದು. ಜನರು ಇದನ್ನು ನಂಬುವುದಿಲ್ಲ ಎಂದು ರಮೇಶ್ ಕುಮಾರ್ ಹೇಳಿದ್ದಾರೆ. "ಜನರು ದಡ್ಡರಲ್ಲ. ಈಗ ಅವರು ವಿಧಿಯಿಲ್ಲದೇ ಸುಮ್ಮನಿರಬಹುದು. ಮುಂದೆ ಸರಿಯಾಗಿ ಪಾಠ ಕಲಿಸುತ್ತಾರೆ," ಎಂದು ಕೇಂದ್ರದ ವಿರುದ್ಧ ರಮೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.