ಪ್ರಧಾನಿ, ಯಡಿಯೂರಪ್ಪ ಅವರ ಜನ್ಮ ದಿನಕ್ಕೆ ಆಗಮಿಸುವ ಹಿಂದೆ ಇರುವ ಪ್ರಮುಖ ಉದ್ದೇಶವೇನು..?

First Published 27, Feb 2018, 1:07 PM IST
What is the Reason Behind PM Visit Davangere
Highlights

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದು, ದಾವಣಗೆರೆಯಲ್ಲಿ ಆಯೋಜಿಸಿರುವ ಹುಟ್ಟುಹಬ್ಬದ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ.

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು 75ನೇ ವಸಂತಕ್ಕೆ ಕಾಲಿಡುತ್ತಿದ್ದು, ದಾವಣಗೆರೆಯಲ್ಲಿ ಆಯೋಜಿಸಿರುವ ಹುಟ್ಟುಹಬ್ಬದ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಲಿದ್ದಾರೆ.

ಚುನಾವಣಾ ರ್ಯಾಲಿ, ಸಮಾರಂಭಗಳು, ಪಕ್ಷದ ಸಮಾವೇಶಗಳಿಗೆ ಸೀಮಿತವಾಗಿದ್ದ ಮೋದಿ ಅವರು ಯಡಿಯೂರಪ್ಪ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ 57ನೇ ವಯಸ್ಸಿಗೆ ರಾಜಕೀಯ ನಿವೃತ್ತಿ ಪಡೆದುಕೊಳ್ಳಬೇಕು ಎಂಬ ಬಿಜೆಪಿ ಯಲ್ಲಿನ ಅಲಿಖಿತ ನಿಯಮ ಯಡಿಯೂರಪ್ಪ ಅವರಿಗೆ ಅನ್ವಯಿಸುವುದಿಲ್ಲ ಎಂಬುದೂ ಸೇರಿದಂತೆ ಮೂರು ಸಂದೇಶಗಳನ್ನು ರವಾನಿಸು ತ್ತಿದ್ದಾರೆ. ದಾವಣಗೆರೆಯಲ್ಲಿನ ಕಾರ್ಯಕ್ರಮವು ಕೇವಲ ಯಡಿಯೂರಪ್ಪ ಅವರ ಹುಟ್ಟುಹಬ್ಬದ ಸಮಾರಂಭ ಮಾತ್ರವಲ್ಲ, ರೈತರ ಸಮಾವೇಶ ಕೂಡ ಆಗಿದೆ.

ಈ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಪ್ರಧಾನಿಗಳು ರೈತರ ಬೆನ್ನಿಗೆ ತಾವಿದ್ದೇವೆ ಎಂಬ ಸಂದೇಶವನ್ನು ಸಾರುವ ಪ್ರಮುಖ ಉದ್ದೇಶವನ್ನೂ ಹೊಂದಿರುವಂತಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧವಿದ್ದೇವೆ. ರೈತರ ಕಲ್ಯಾಣವೇ ಮೊದಲ ಆದ್ಯತೆ ಎಂದು ರಾಜ್ಯದ 75ಕ್ಕೂ ಹೆಚ್ಚು ಲಕ್ಷ ರೈತರಿಗೆ ಸಂದೇಶವೊಂದನ್ನು ರವಾನಿಸುವುದು ಸಮಾವೇಶದ ಧ್ಯೇಯವಾಗಿದೆ.

ರಾಜಕೀಯ ತಜ್ಞರ ಲೆಕ್ಕಾಚಾರದ ಪ್ರಕಾರ ಇದು ಮೊದಲ ಸಂದೇಶವಾದರೆ, ಪ್ರಧಾನಿಗಳ ಎರಡನೇ ಉದ್ದೇಶವು ಯಡಿಯೂರಪ್ಪ ಅವರು ವಿವಾದಾತ್ಮಕ ವ್ಯಕ್ತಿಯಲ್ಲ ಮತ್ತು ಅವರು ದೇಶದಲ್ಲಿಯೇ ಪಕ್ಷದಲ್ಲಿನ ರೈತರ ಪರ ಹಿರಿಯ ನಾಯಕ ಎಂದು ಬಿಂಬಿಸುವುದು. ಮೋದಿ ಅವರು ಇದನ್ನು ಈ ಹಿಂದೆ 2017 ಅ.29ರ ಧರ್ಮಸ್ಥಳ ಭೇಟಿ ಮತ್ತು ಫೆ.4ರಂದು ನಡೆದ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಸ್ಪಷ್ಟಪಡಿಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದಲ್ಲಿ ವಯೋಮಿತಿಯ ನಿರ್ಬಂಧನೆಗೆ ಸಂಬಂಧಿಸಿದ ವಿಚಾರ. 75 ವರ್ಷದ ಬಳಿಕ ಪಕ್ಷದ ರಾಜಕೀಯದಲ್ಲಿ ಯಾವುದೇ ಸ್ಥಾನ-ಮಾನ ಕಲ್ಪಿಸದೆ ಇರುವುದು ಅಲಿಖಿತ ನಿಯಮ. ಆದರೆ, ಇದು ಯಡಿಯೂರಪ್ಪ ಅವರಿಗೆ ಅನ್ವಯವಾಗುವುದಿಲ್ಲ ಎಂಬ ಸ್ಪಷ್ಟ ಸೂಚನೆಯನ್ನು ನೀಡುವುದು ಪ್ರಮುಖ ಉದ್ದೇಶವಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿಯು ಯೂಡಿಯೂರಪ್ಪ ಅವರೇ ಎಂಬ ಸಂದೇಶ ರವಾನಿಸುವುದು ಸಹ ಸಮಾವೇಶದ ಭಾಗವಾಗಿದೆ ಎನ್ನುವುದು

ತಜ್ಞರ ಅಭಿಪ್ರಾಯ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದು ಅನುಮಾನ ಎಂಬ ವದಂತಿಗಳು ಹಬ್ಬಿವೆ. ಇದೊಂದು ಸೂಕ್ಷ್ಮ ವಿಚಾರವಾಗಿ ಪರಿಗಣಿಸಲಾಗಿದ್ದು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಿಲ್ಲ ಎಂಬ ವದಂತಿಗೆ ಸಮಾವೇಶದ ಮೂಲಕ ನರೇಂದ್ರ ಮೋದಿ ಅವರು ತೆರೆ ಎಳೆಯಲಿದ್ದಾರೆ.

ರೈತರ ಸಮಾವೇಶ ಮತ್ತು ಯಡಿಯೂರಪ್ಪ ಅವರ ಜನ್ಮ ದಿನ ಕಾರ್ಯಕ್ರಮದಲ್ಲಿ ರೈತರ ಪರ ಇರುವ ಕಾಳಜಿ ಬಗ್ಗೆ ವಾಗ್ದಾನ ನೀಡಲಿದ್ದಾರೆ. ಅಲ್ಲದೇ, ಯಡಿಯೂರಪ್ಪ ಅವರ ಆಯ್ಕೆಯು ಪ್ರಧಾನಿಯ ಆಯ್ಕೆ ಎಂಬುದನ್ನು ರಾಜ್ಯದ ಜನತೆಗೆ ಮತ್ತು ಪಕ್ಷದ ರಾಷ್ಟ್ರೀಯ ನಾಯಕರಿಗೆ ಪರೋಕ್ಷವಾಗಿ ಹಾಗೂ ಸೂಚ್ಯವಾಗಿ ತಿಳಿಸಿಕೊಡಲಿದ್ದಾರೆ. ಬಿಜೆಪಿ ನಾಯಕರ ಹುಟ್ಟು ಹಬ್ಬದ ಸಮಾರಂಭದಲ್ಲಿ ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವುದಿಲ್ಲ.

ಆದರೆ, ಯಡಿಯೂರಪ್ಪ ವಿಷಯದಲ್ಲಿ ವಿನಾಯಿತಿ ನೀಡಲಾಗಿದೆ. ದಾವಣಗೆರೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿ ಯಾಗಿ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಅವರು ಖುದ್ದಾಗಿ ಕೋರಲಿದ್ದಾರೆ. ಇದು, ಯಡಿಯೂರಪ್ಪ ಮುಖ್ಯ ಮಂತ್ರಿಯಾಗುವುದಿಲ್ಲ ಎಂದು ಮಾತನಾಡುವವರ ಬಾಯಿ ಮುಚ್ಚಿಸುವ ತಂತ್ರವೂ ಆಗಿದೆ. ಯಡಿಯೂರಪ್ಪ ಅವರು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಾಗ ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಶುಭಾಶಯ ಕೋರಿದ್ದರು. ಇದೀಗ ಪ್ರಧಾನಿ ನರೇಂದ್ರ ಮೊದಿ ಅವರು ಯಡಿಯೂರಪ್ಪ ಅವರ ೭೫ನೇ ಹುಟ್ಟುಹಬ್ಬದಲ್ಲಿ ಭಾಗಿಯಾಗಲಿದ್ದಾರೆ.

loader