ಬೆಂಗಳೂರು [ಜು.07]: ಕಾಂಗ್ರೆಸ್‌ನ ಅತೃಪ್ತ ವಲಯದಲ್ಲಿ ಬಹಿರಂಗವಾಗಿ ಗುರುತಿಸಿಕೊಳ್ಳದ ಹಾಗೂ ರಾಜೀನಾಮೆಯ ಯಾವುದೇ ಸುಳಿವು ನೀಡದ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ (ಎಸ್‌ಬಿಎಂ) ಅವರು ಹಠಾತ್ ರಾಜೀನಾಮೆ ನೀಡಲು ರಾಮಲಿಂಗಾರೆಡ್ಡಿ ಅವರಿಗೆ ಪಕ್ಷ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಆದ ಅವಮಾನಗಳು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೋರಿದ ನಿರ್ಲಕ್ಷ್ಯ ಕಾರಣ ಎನ್ನಲಾಗಿದೆ.

ಕಳೆದ ಸರ್ಕಾರದ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಹಾಗೂ ಬೆಂಗಳೂರು ನಗರದಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಲು ಪ್ರಮುಖ ಕೊಡುಗೆ ನೀಡಿದ್ದ ರಾಮಲಿಂಗಾರೆಡ್ಡಿ ಅವರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿರಲಿಲ್ಲ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಖುದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರು ಚುನಾವಣೆ ನಂತರ ಸಂಪುಟಕ್ಕೆ ಸೇರ್ಪಡೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈ ಭರವಸೆಯನ್ನು ಸಿದ್ದರಾಮಯ್ಯ ಈಡೇರಿಸಲಿಲ್ಲ.

ಪಕ್ಷದಲ್ಲಿ ರಾಮಲಿಂಗಾರೆಡ್ಡಿ ಅವರಿಗೆ ಯಾವುದೇ ಗಾಡ್ಫಾದರ್‌ಗಳು ಇರಲಿಲ್ಲ. ಹೀಗಾಗಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ನೆಚ್ಚಿಕೊಂಡಿದ್ದರು. ಕೊನೆ ಹಂತದಲ್ಲಿ ಸಿದ್ದರಾಮಯ್ಯ ಅವರು ‘ನನ್ನ ಕೈಯಲ್ಲೂ ನಿಮಗೆ ನ್ಯಾಯ ಒದಗಿಸಲು ಆಗುತ್ತಿಲ್ಲ. ಕೆ.ಸಿ. ವೇಣುಗೋಪಾಲ್ ಹಂತದಲ್ಲಿ ಪ್ರಯತ್ನ ಮಾಡಿ’ ಎಂದು ರಾಮಲಿಂಗಾರೆಡ್ಡಿ ಅವರನ್ನು ಸಾಗ ಹಾಕಿದರು ಎನ್ನಲಾಗಿದೆ. 

ಈ ಘಟನೆ ನಂತರ ಸಿದ್ದರಾಮಯ್ಯ ಬಗ್ಗೆ ರಾಮಲಿಂಗಾರೆಡ್ಡಿ ತೀವ್ರ ಬೇಸರಗೊಂಡಿದ್ದರು. ಇದನ್ನು ಅರಿತ ಸಿದ್ದರಾಮಯ್ಯ ಅವರು ಹಲವು ಬಾರಿ
ತಮ್ಮನ್ನು ಭೇಟಿ ಮಾಡುವಂತೆ ಸಂದೇಶ ಕಳುಹಿಸಿದರೂ ರಾಮಲಿಂಗಾರೆಡ್ಡಿ ಅವರು ಸಿದ್ದರಾಮಯ್ಯ ಅವರ ಭೇಟಿಗೆ ತೆರಳಲಿಲ್ಲ. ಅಲ್ಲದೆ, ಸಿದ್ದು ಗುಂಪಿನೊಂದಿಗೆ ಅಂತರವನ್ನು ಕಾಯ್ದುಕೊಂಡರು ಎನ್ನಲಾಗಿದೆ.

ಬೆಂಗಳೂರು ಶಾಸಕರಿಗೆ ಗುರು: ಬೆಂಗಳೂರು ನಗರದ ಮಟ್ಟಿಗೆ ಪಕ್ಷ ಭೇದವಿಲ್ಲದೆ ನಗರದ ಬಹುತೇಕ ಶಾಸಕರಿಗೆ ಗುರು ಸ್ಥಾನದಲ್ಲಿರುವ ರಾಮಲಿಂಗಾರೆಡ್ಡಿ ಅವರು ಅತೃಪ್ತಿ ಹೊಂದಿ ರುವುದನ್ನು ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಬಿಜೆಪಿಯ ನಗರದ ಪ್ರಮುಖ ನಾಯಕರು ಬಳಸಿಕೊಂಡರು ಎನ್ನಲಾಗುತ್ತಿದೆ. ಈ ಹಂತದಲ್ಲಿ ರಾಮಲಿಂಗಾರೆಡ್ಡಿ ಅವರನ್ನು ಸಂಪರ್ಕಿಸಿದ ಬಿಜೆಪಿಯ ಬೆಂಗಳೂರಿನ ನಾಯಕರು ರಾಮಲಿಂಗಾರೆಡ್ಡಿ ಹಾಗೂ ಅವರೊಂದಿಗೆ ಆತ್ಮೀಯತೆ ಹೊಂದಿರುವ ಕೆಲ ಶಾಸಕರ ರಾಜೀನಾಮೆ ಕೊಡಿಸುವಂತೆ ಮನವೊಲಿಸಲು ಮುಂದಾದರು ಎನ್ನಲಾಗಿದೆ.

ಬೆಂಗಳೂರಿನ ಮೇಲೆ ಸಂಪೂರ್ಣ ಹಿಡಿತ ಇರುವ ರಾಮಲಿಂಗಾರೆಡ್ಡಿ ಅವರನ್ನು ಸೆಳೆದರೆ ಕನಿಷ್ಠ 4 - 5 ಮಂದಿ ಶಾಸಕರು ಬಿಜೆಪಿ ಕಡೆ ಬರಲಿದ್ದಾರೆ ಎಂಬ ಉದ್ದೇಶದಿಂದ ಬಿಜೆಪಿ ಆಪರೇಷನ್ ಪ್ರಯತ್ನ ಬಿಗಿಗೊಳಿಸಿತ್ತು. ಈ ಹಂತದಲ್ಲಿ ಅನುದಾನ ಸೇರಿದಂತೆ ವೈಯಕ್ತಿಕವಾಗಿ ಅಧಿಕಾರ ಸಿಗದ ಬಗ್ಗೆ ಅಸಮಾಧಾನ ಹೊಂದಿದ್ದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜು ಹಾಗೂ ಮುನಿರತ್ನ ಅವರು ರಾಮಲಿಂಗಾರೆಡ್ಡಿ ಅವರು ತಮ್ಮ ಬಣಕ್ಕೆ ಸೆಳೆದುಕೊಳ್ಳಲು ಯಶಸ್ವಿಯಾದರು. ಎಸ್.ಟಿ. ಸೋಮಶೇಖರ್ ಅವರಿಗೆ ಬಿಡಿಎ ಅಧ್ಯಕ್ಷ ಹುದ್ದೆ ನೀಡಿದ್ದರೂ ಕುಮಾರಸ್ವಾಮಿ ಅವರೇ ಸಂಪೂರ್ಣ ಅಧಿಕಾರ ಚಲಾಯಿಸುತ್ತಿದ್ದರು. ಇನ್ನು ಬೈರತಿ ಅವರಿಗೆ ಸಾಬೂನು ಮತ್ತು ಮಾರ್ಜಕ ನಿಯಮದ ಅಧ್ಯಕ್ಷ ಹುದ್ದೆ ನೀಡಿದ್ದರೂ ಅವರು ಕೇಳಿದ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿ ಸಲು ಕೈಗಾರಿಕಾ ಸಚಿವ ಜಾರ್ಜ್ ಅಡ್ಡಿಪಡಿಸಿದ್ದರು. ಇದು ದೊಡ್ಡ ಮಟ್ಟದ ಗಲಾಟೆಗೆ ಕಾರಣವಾದರೂ ಅವರು ಸ್ಪಂದಿಸಿ ರಲಿಲ್ಲ. ಇನ್ನು ಮುನಿರತ್ನ ಅವರಿಗೂ ಇದೇ ಪರಿಸ್ಥಿತಿ ಇತ್ತು.