ಬೆಂಗಳೂರು :  ಬಿಬಿಎಂಪಿಯ 52ನೇ ಮೇಯರ್‌ ಆಗಿ ಆಯ್ಕೆಯಾಗಿರುವ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಬಿ.ಕಾಂ ಪದವೀಧರರು.

ಲಿಂಗಾಯತ ಸಮುದಾಯದವರಾದ ಗಂಗಾಂಬಿಕೆ ಅವರು ಜನಿಸಿದ್ದು 1978ರಲ್ಲಿ. ಪತಿ ಬಿ.ಮಲ್ಲಿಕಾರ್ಜುನ್‌ ಎಂಜಿನಿಯರಿಂಗ್‌ ಪದವೀಧರರು. ಪ್ರಜ್ವಲ್‌ ಮತ್ತು ನಂದಿನಿ ಮಕ್ಕಳಿದ್ದಾರೆ. 2010ರಲ್ಲಿ ಜಯನಗರ ವಾರ್ಡ್‌ನಿಂದ ಮೊಲದ ಬಾರಿಗೆ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಅವರು, 2015ರಲ್ಲಿ ನಡೆದ ಪಾಲಿಕೆ ಚುನಾವಣೆಯಲ್ಲಿ 2ನೇ ಬಾರಿಗೆ ಚುನಾಯಿತರಾಗಿದರು. ಇದೀಗ ಮೇಯರ್‌ ಗಾಧಿ ಅಲಂಕರಿಸಿದ್ದಾರೆ.

ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಕಟ್ಟಾ ಬೆಂಬಲಿಗರಾದ ಗಂಗಾಂಬಿಕೆ ಮಲ್ಲಿಕಾರ್ಜುನ್‌ ವಾರ್ಡ್‌ನ ವಿವಿಧ ಬಡಾವಣೆ ನಿವಾಸಿಗಳ ಸಂಘಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಪಾಲಿಕೆ ಅಧಿಕಾರಿಗಳ ಮೂಲಕ ಅಂಗವಿಕಲರು ಮತ್ತು ಬಡ ಕುಟುಂಬ ವರ್ಗದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 

ಬೈರಸಂದ್ರ ಕೆರೆಯ ಮರು ನಿರ್ಮಾಣ, ನಗರದಲ್ಲಿ ಮೊದಲ ಹೊರಾಂಗಣ ಜಿಮ್‌ ಅಳವಡಿಕೆ, ಸೋಮೇಶ್ವರ ನಗರದಲ್ಲಿ ಪಾಳು ಬಿದ್ದಿದ್ದ ಐತಿಹಾಸಿಕ ಕಲ್ಯಾಣಿ ಆಧುನೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


ಉಪಮೇಯರ್‌ ಡಿಪ್ಲೊಮಾ ವಿದ್ಯಾರ್ಹತೆ

ನೂತನ ಉಪಮೇಯರ್‌ ರಮೀಳಾ ಉಮಾಶಂಕರ್‌ 2015 ಚುನಾವಣೆಯಲ್ಲಿ ಕಾವೇರಿಪುರ ವಾರ್ಡ್‌ನಿಂದ ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾದವರು. 

1974ರಲ್ಲಿ ಜನಿಸಿದ ಇವರು, ಕುರುಬ ಸಮುದಾಯಕ್ಕೆ ಸೇರಿದವರು. ಡಿಪ್ಲೊಮಾ ವಿದ್ಯಾರ್ಹತೆ ಪಡೆದಿದ್ದಾರೆ. ಪತಿ ಜೆಡಿಎಸ್‌ ಮುಖಂಡರಾದ ಡಿ.ಉಮಾಶಂಕರ್‌ ಮಾಜಿ ಪಾಲಿಕೆ ಸದಸ್ಯ. ವರುಣ್‌ ಕುಮಾರ್‌ ಮತ್ತು ಭೂಮಿಕಾ ರಾಣಿ ಇಬ್ಬರು ಮಕ್ಕಳಿದ್ದಾರೆ.

ಮೊದಲ ಬಾರಿಗೆ ಪಾಲಿಕೆ ಸದಸ್ಯೆಯಾಗಿ ಆಯ್ಕೆಯಾದರೂ ಪಾಲಿಕೆಯಲ್ಲಿ ಜೆಡಿಎಸ್‌ ಪಕ್ಷದ ನಾಯಕಿಯಾಗಿ ಈ ಹಿಂದೆ ಜವಾಬ್ದಾರಿ ನಿಭಾಯಿಸಿದ ಅನುಭವ ಇದೆ. ವಾರ್ಡ್‌ ಸ್ವಚ್ಛತೆ, ಬಡ, ನಿರ್ಗತಿಕರ ಅಭಿವೃದ್ಧಿಗೆ ಕಾರ್ಯಕ್ರಮ ಸೇರಿದಂತೆ ವಾರ್ಡ್‌ನಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದಾರೆ.