ಬೆಂಗಳೂರು :  ಕಾಂಗ್ರೆಸ್‌ನ ಅತೃಪ್ತ ಶಾಸಕರು ಬಿಜೆಪಿಯತ್ತ ಸಾಗಿ ರಾಜ್ಯದಲ್ಲಿ ಮತ್ತೆ ‘ಕಮಲ’ ಅರಳಲು ಕಾರಣರಾಗುವರೇ? ಕಾಂಗ್ರೆಸ್‌ ಶಾಸಕರ ಬಯಕೆಯಂತೆ ಮುಖ್ಯಮಂತ್ರಿ ಬದಲಾವಣೆ ಘಟಿಸುವುದೇ? ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ಚುಕ್ಕಾಣಿ ಹಿಡಿಯುವರೇ? ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವುದೇ? ಶೀಘ್ರವೇ ಮತ್ತೊಂದು ಚುನಾವಣೆಗೆ ರಾಜ್ಯದ ಜನತೆ ಸಾಕ್ಷಿಯಾಗುವರೇ? ಅಥವಾ ಇದ್ಯಾವುದೂ ಆಗದೆ ಮೈತ್ರಿ ಸರ್ಕಾರ ಎಂದಿನಂತೆ ಮುಂದುವರೆಯುವುದೇ?

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುವ ಮೇ 23ರ ನಂತರ ಏನಾಗಬಹುದು ಎಂಬ ಬಗ್ಗೆ ರಾಜ್ಯ ರಾಜಕೀಯ ವಲಯದಲ್ಲಿ ಸತತವಾಗಿ ಕೇಳಿ ಬರುತ್ತಿರುವ ಪ್ರಶ್ನೆಗಳಿವು.

ಮತದಾನ ಮುಗಿದ ಕೂಡಲೇ ದೋಸ್ತಿ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರೆ, ಈಗಾಗಲೇ ಬಿಜೆಪಿಯಲ್ಲಿ ಒಂದು ಕಾಲಿಟ್ಟು ತಾಂತ್ರಿಕವಾಗಿ ಮಾತ್ರ ಕಾಂಗ್ರೆಸ್‌ನಲ್ಲಿರುವ ರಮೇಶ್‌ ಜಾರಕಿಹೊಳಿ ನೇತೃತ್ವದ ಕಾಂಗ್ರೆಸ್‌ ಅತೃಪ್ತ ಶಾಸಕರ ಚಟುವಟಿಕೆಗಳು ತೆರೆಯ ಮೇಲೆ ಅಪ್ಪಳಿಸುತ್ತಲೇ ಇವೆ. ಹೀಗಾಗಿ, ಕೇಂದ್ರದಲ್ಲಿ ಯಾವ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆಯೋ ಅದರ ನೇರ ಪರಿಣಾಮ ರಾಜ್ಯ ಸರ್ಕಾರದ ಮೇಲೆ ಉಂಟಾಗಿ ರಾಜಕೀಯ ವಿಪ್ಲವ ಘಟಿಸುವುದಂತೂ ಖಚಿತ.

ಇಂತಹ ಸ್ಥಿತಿ ನಿರ್ಮಾಣವಾದಾಗ ಪಕ್ಷ ಹಾಗೂ ತಮ್ಮ ವೈಯಕ್ತಿಕ ಹಿತಾಸಕ್ತಿ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ನಾಡಿನ ಪ್ರತಿಯೊಬ್ಬ ರಾಜಕಾರಣಿಯು ತನ್ನದೇ ಆದ ಲೆಕ್ಕಾಚಾರದಲ್ಲಿ ತೊಡಗಿದ್ದಾನೆ. ಇಂತಹುದೇ ಲೆಕ್ಕಾಚಾರವನ್ನು ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿಯ ‘ಥಿಂಕ್‌ ಟ್ಯಾಂಕ್‌’ಗಳು ನಡೆಸುತ್ತಿವೆ. ಎಲ್ಲರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಮತ್ತು ಫಲಿತಾಂಶ ಯಾವ ರೀತಿ ಬಂದರೆ ತಮ್ಮ ಮುಂದಿನ ಆಟ ಹೇಗಿರಬೇಕು ಎಂಬ ಬಗ್ಗೆ ಈಗಾಗಲೇ ಸ್ಥೂಲ ಲೆಕ್ಕಾಚಾರ ಹಾಕಿಕೊಂಡಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ರಾಜ್ಯ ರಾಜಕಾರಣದ ಹಿರಿಯ ತಲೆಯಾಳುಗಳು ಹಾಗೂ ರಾಜಕೀಯ ವಿಶ್ಲೇಷಕರು ಲೋಕಸಭೆ ಫಲಿತಾಂಶದ ಸ್ವರೂಪ ಹೇಗಿರುತ್ತದೆ ಎಂಬ ಆಧಾರದ ಮೇಲೆ ತಮ್ಮದೇ ಆದ ಲೆಕ್ಕಾಚಾರವನ್ನು ಹಂಚಿಕೊಂಡಿದ್ದಾರೆ.

ಮೋದಿ ನೇತೃತ್ವದಲ್ಲಿ ಮತ್ತೆ ಬಹುಮತದ ಬಿಜೆಪಿ ಸರ್ಕಾರ ಆದರೆ...

1. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇರುವುದಿಲ್ಲ

ಏಕೆಂದರೆ, ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗುತ್ತದೆ. ಆಗ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರ ನಡುವೆ ಈಗ ಇರುವ ಒಗ್ಗಟ್ಟು ನಶಿಸಬಹುದು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹಾಗೂ ಡಾ. ಜಿ. ಪರಮೇಶ್ವರ್‌ ತಮ್ಮದೇ ತಂಡಗಳನ್ನು ರಚಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಹಿಡಿತ ಸಾಧಿಸಲು ಯತ್ನಿಸಬಹುದು. ಇದೇ ವೇಳೆ ಮೈತ್ರಿ ಕೂಟದಲ್ಲಿ ತಿಕ್ಕಾಟ ಹೆಚ್ಚಾಗಬಹುದು. ಇದರ ಪರಿಣಾಮವಾಗಿ ಮೈತ್ರಿ ಸರ್ಕಾರ ಉಳಿದುಕೊಳ್ಳುವ ಸಾಧ್ಯತೆ ಇಲ್ಲ.

2. ಬಿಜೆಪಿ ಸರ್ಕಾರ ರಚನೆಯಾಗಬಹುದು

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಆಗ ಕಾಂಗ್ರೆಸ್‌ನ ಅತೃಪ್ತರು ನೇರವಾಗಿ ಬಿಜೆಪಿಯತ್ತ ಸಾಗಬಹುದು. ಮೈತ್ರಿ ಕೂಟದಲ್ಲೂ ಒಳ ಜಗಳ ಉಂಟಾಗಿರುವ ಕಾರಣ ಅತೃಪ್ತರ ದೊಡ್ಡ ಹಿಂಡು ಬಿಜೆಪಿಗೆ ದೊರೆಯಬಹುದು. ಏಕೆಂದರೆ, ಈಗಾಗಲೇ ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿಯ ಜತೆ ಗುರುತಿಸಿಕೊಂಡಿದ್ದಾರೆ. ಇನ್ನೂ ಕೆಲವರು ಬಿಜೆಪಿಯತ್ತ ಮನಸ್ಸು ಇದ್ದರೂ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಫಲಿತಾಂಶ ಬಿಜೆಪಿಗೆ ಪೂರಕವಾಗಿದ್ದರೆ ಅವರು ಅತ್ತ ಹಾರುವ ಸಾಧ್ಯತೆಯಿದೆ. ಶಾಸಕ ಸ್ಥಾನಕ್ಕೆ ಅತೃಪ್ತರು ರಾಜೀನಾಮೆ ನೀಡುವ ಮೂಲಕ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದು, ಬಿಜೆಪಿ ಸರ್ಕಾರ ರಚನೆಗೆ ಮುಂದಾಗಬಹುದು.

3. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಬಹುದು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದರೆ ಹಾಗೂ ರಾಜ್ಯದಲ್ಲೂ ಬಿಜೆಪಿ ಸಂಸದರ ಸಂಖ್ಯೆ ಹೆಚ್ಚಾದರೆ ಮೋದಿ ಹವಾ ಇರುವುದು ಸಾಬೀತಾಗುತ್ತದೆ. ಇದರ ಲಾಭವನ್ನು ಪಡೆಯಲು ಹೊಸ ಜನಾದೇಶ ಪಡೆಯುವ ನಿರ್ಧಾರಕ್ಕೆ ಬಿಜೆಪಿ ಬರಬಹುದು. ಆಗ ಮೈತ್ರಿ ಸರ್ಕಾರವನ್ನು ಅಲ್ಪ ಮತಕ್ಕೆ ಕುಸಿಯುವಂತೆ ಮಾಡಬಹುದು. ಆದರೆ, ಸರ್ಕಾರ ರಚಿಸುವ ಪ್ರಸ್ತಾವನೆಯನ್ನು ರಾಜ್ಯಪಾಲರ ಮುಂದಿಡದೆ ರಾಷ್ಟ್ರಪತಿ ಆಡಳಿತ ಜಾರಿಯಾಗುವಂತೆ ನೋಡಿಕೊಳ್ಳಬಹುದು. ಆರು ತಿಂಗಳು ಅಥವಾ ಒಂದು ವರ್ಷದ ರಾಷ್ಟ್ರಪತಿ ಆಡಳಿತದ ನಂತರ ಜನಾದೇಶ ಪಡೆಯಲು ಮುಂದಾಗಬಹುದು.

4. ಬಿಜೆಪಿ- ಜೆಡಿಎಸ್‌ ಸರ್ಕಾರ ರಚನೆಯಾಗಬಹುದು

ಜೆಡಿಎಸ್‌ ತಾನೇ ಮುಂದಾಗಿ ಬಿಜೆಪಿಯತ್ತ ಸಾಗಬಹುದು. ಕೆಲ ಹೊಂದಾಣಿಕೆ ಮಾಡಿಕೊಂಡು ಬಿಜೆಪಿಯ ಬೆಂಬಲ (ಅದು ಬಾಹ್ಯವಿರಬಹುದು ಅಥವಾ ನೇರ ಬೆಂಬಲವಿರಬಹುದು) ಪಡೆದು ಸರ್ಕಾರವನ್ನು ಉಳಿಸಿಕೊಳ್ಳುವ ಯತ್ನ ನಡೆಸಬಹುದು. ಮುಖ್ಯಮಂತ್ರಿ ಹುದ್ದೆಯೊಂದನ್ನು ಉಳಿಸಿಕೊಂಡು ಉಳಿದ ವಿಚಾರಗಳಲ್ಲಿ ಹೆಚ್ಚು ಹೊಂದಾಣಿಕೆಗೆ ಮುಂದಾಗಿ ಬಿಜೆಪಿ ಬೆಂಬಲದಿಂದ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನ ನಡೆಸಬಹುದು.

ಮಿತ್ರರ ನೆರವಿನಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ...

1. ಮೈತ್ರಿಗೆ ಯಾವುದೇ ಧಕ್ಕೆಯಾಗದೆ ಸರ್ಕಾರ ಉಳಿದುಕೊಳ್ಳಬಹುದು

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿ ಕೂಟ ಸರ್ಕಾರ ರಚನೆಯಾದರೆ ಅದರ ಅರ್ಥ ಮೋದಿ ಅಲೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂದಾಗುತ್ತದೆ. ಆಗ, ಬಿಜೆಪಿಯತ್ತ ಸಾಗಲು ಸಜ್ಜಾಗಿರುವ ಅತೃಪ್ತ ಕಾಂಗ್ರೆಸ್ಸಿಗರು ಹಿಂದೇಟು ಹಾಕಬಹುದು. ಹೀಗಾಗಿ ರಾಜ್ಯ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡುವಷ್ಟುಸಂಖ್ಯೆ ದೊರೆಯದಿರುವ ಸಾಧ್ಯತೆ ನಿರ್ಮಾಣವಾಗುತ್ತದೆ. ಆಗ ಸರ್ಕಾರ ಉಳಿದುಕೊಳ್ಳಬಹುದು.

2. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿ ವಿಧಾನಸಭೆ ವಿಸರ್ಜನೆಯಾಗಬಹುದು

ಮೈತ್ರಿ ಕೂಟ ಸರ್ಕಾರಕ್ಕೆ ಧಕ್ಕೆಯಾಗದೆ ಇದ್ದರೂ, ತನ್ನ ಶಾಸಕರ ಒತ್ತಡದಿಂದ ಮೈತ್ರಿ ಕೂಟದ ಮೇಲೆ ಕಾಂಗ್ರೆಸ್‌ ನಾಯಕತ್ವ ಹೆಚ್ಚಿನ ಹಿಡಿತ ಸಾಧಿಸಲು ಮುಂದಾಗಬಹುದು. ಇದರಿಂದ ಆಂತರಿಕ ಕಚ್ಚಾಟ ಹೆಚ್ಚಾಗಬಹುದು. ಅಂತಿಮವಾಗಿ ಜೆಡಿಎಸ್‌ ನಾಯಕತ್ವವು ವಿಧಾನಸಭೆ ವಿಸರ್ಜನೆ ಮಾಡುವ ನಿರ್ಧಾರವನ್ನು ಕೈಗೊಳ್ಳಬಹುದು.

3. ಸಂವಿಧಾನ ಬಿಕ್ಕಟ್ಟು ನಿರ್ಮಾಣ, ರಾಷ್ಟ್ರಪತಿ ಆಡಳಿತ ಜಾರಿ

ಮೈತ್ರಿ ಕೂಟದಲ್ಲಿ ಕಚ್ಚಾಟವನ್ನು ಮುಂದಿಟ್ಟುಕೊಂಡು ಅಥವಾ ಮೈತ್ರಿ ಸರ್ಕಾರದ ಸಂಖ್ಯಾಬಲ ಕುಸಿಯುವಂತೆ ಮಾಡುವ ಮೂಲಕ ರಾಜ್ಯದಲ್ಲಿ ಸಂವಿಧಾನ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡಲು ಬಿಜೆಪಿ ಯತ್ನಿಸಬಹುದು. ಇದು ಸಾಧ್ಯವಾದರೆ, ಅದರ ಆಧಾರದ ಮೇಲೆ ರಾಷ್ಟ್ರಪತಿ ಆಡಳಿತ ಜಾರಿಗೆ ತರಬಹುದು. ಆರು ತಿಂಗಳು ಅಥವಾ ಒಂದು ವರ್ಷದ ರಾಷ್ಟ್ರಪತಿ ಆಡಳಿತ ನಂತರ ಹೊಸ ಜನಾದೇಶಕ್ಕೆ ಮುಂದಾಗಬಹುದು.

4. ಬಿಜೆಪಿ ಸರ್ಕಾರ ರಚನೆಯಾಗಲೂಬಹುದು

ಕಾಂಗ್ರೆಸ್‌ನ ಅತೃಪ್ತ ಶಾಸಕರು ತನ್ನತ್ತ ಬರುವಂತೆ ಮಾಡುವಲ್ಲಿ ಒಂದು ವೇಳೆ ಯಶಸ್ವಿಯಾದರೆ ಆಗ ಮೈತ್ರಿ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯೂ ಇದೆ.

5. ಬಿಜೆಪಿ-ಜೆಡಿಎಸ್‌ ಸರ್ಕಾರ ಅಸ್ತಿತ್ವಕ್ಕೆ ಬರಬಹುದು.

ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ ನಾಲ್ಕಕ್ಕೂ ಹೆಚ್ಚು ಸ್ಥಾನ ಗಳಿಸಿದರೆ ಬಿಜೆಪಿ ಮಿತ್ರ ಪಕ್ಷವಾಗಿ ಬದಲಾಗಬಹುದು. ಆಗ ರಾಜ್ಯದ ಸರ್ಕಾರದ ಸ್ವರೂಪದಲ್ಲಿ ಬದಲಾವಣೆಯಾಗಬಹುದು. ಬಿಜೆಪಿ-ಜೆಡಿಎಸ್‌ ಸರ್ಕಾರ ಬರಬಹುದು. ಆಗ ಮುಖ್ಯಮಂತ್ರಿ ಹುದ್ದೆಯಲ್ಲಿ ಕುಮಾರಸ್ವಾಮಿ ಮುಂದುವರೆಯಲು ಯತ್ನಿಸಬಹುದು. ಇದಕ್ಕೆ ಬಿಜೆಪಿ ಒಪ್ಪದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿ ಕೇಂದ್ರ ಸರ್ಕಾರದ ಭಾಗವಾಗಿ, ರಾಜ್ಯದಲ್ಲಿ ಬಿಜೆಪಿಯ ನಾಯಕರೊಬ್ಬರು ಮುಖ್ಯಮಂತ್ರಿಯಾಗಬಹುದು. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಜೆಡಿಎಸ್‌ ತೃಪ್ತಿಪಡಬಹುದು.

6. ಮೈತ್ರಿ ಕೂಟ ಮುಂದುವರೆದು, ಜೆಡಿಎಸ್‌ಗೆ ಹೆಚ್ಚಿನ ನಿಯಂತ್ರಣ ಸಿಗಬಹುದು

ಬಿಜೆಪಿ ಹಾಗೂ ಜೆಡಿಎಸ್‌ ಒಗ್ಗೂಡುವ ಲಕ್ಷಣ ಕಂಡು ಬಂದಾಗ ತನ್ನ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಪ್ರಯತ್ನ ನಡೆಸಬಹುದು. ಜೆಡಿಎಸ್‌ಗೆ ಮತ್ತಷ್ಟುಹೆಚ್ಚಿನ ಅಧಿಕಾರದ ಆಮಿಷ ನೀಡಿ ಮೈತ್ರಿ ಸರ್ಕಾರ ಕನಿಷ್ಠ ಇನ್ನೂ ಒಂದು ವರ್ಷವಾದರೂ ಮುಂದುವರೆಯುವಂತೆ ನೋಡಿಕೊಳ್ಳುವ ಪ್ರಯತ್ನ ನಡೆಸಬಹುದು.

ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ರಚನೆಯಾದರೆ...

1. ಮೈತ್ರಿ ಸರ್ಕಾರ ಸುಭದ್ರವಾಗಿ ಮುಂದುವರೆಯಬಹುದು.

ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಮಿತ್ರ ಪಕ್ಷಗಳ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಆಗ ರಾಜ್ಯ ಮೈತ್ರಿ ಸರ್ಕಾರದಲ್ಲಿ ಯಾವುದೇ ಬದಲಾವಣೆಯಾಗದಿರಬಹುದು. ಕೇಂದ್ರದ ಮೈತ್ರಿ ಕೂಟದಲ್ಲಿ ಜೆಡಿಎಸ್‌ ಸಹ ಒಂದು ಭಾಗವಾಗಿರುತ್ತದೆ. ಅಲ್ಲದೆ, ಸಂಭಾವ್ಯ ಮಿತ್ರಕೂಟದ ಇತರ ಪಕ್ಷಗಳ ನಾಯಕರ ಜತೆಗೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಮೈತ್ರಿ ಕೂಟದ ಹಾಲಿ ಸ್ವರೂಪವನ್ನು ಬದಲಿಸಲು ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗದೆ ಮೈತ್ರಿ ಸರ್ಕಾರ ಹಾಲಿ ಸ್ಥಿತಿಯಲ್ಲೇ ಮುಂದುವರೆಯಬಹುದು.

2. ಮೈತ್ರಿ ಸರ್ಕಾರ ಮುಂದುವರೆದರೂ ಮುಖ್ಯಮಂತ್ರಿ ಬದಲಾವಣೆಯಾಗಬಹುದು

ಕುಮಾರಸ್ವಾಮಿ ನೇತೃತ್ವದಲ್ಲೇ ಸರ್ಕಾರವಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ಶಕ್ತಿ ಕ್ಷೀಣಿಸುತ್ತದೆ. ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ ಆಗಿರುವ ಪರಿಸ್ಥಿತಿ ರಾಜ್ಯ ಕಾಂಗ್ರೆಸ್‌ಗೂ ಬರಬಹುದು ಎಂದು ರಾಜ್ಯ ನಾಯಕತ್ವ ಹೈಕಮಾಂಡ್‌ಗೆ ವಿವರಿಸಬಹುದು. ವಾಸ್ತವವಾಗಿ ಲೋಕಸಭಾ ಚುನಾವಣೆ ಮೈತ್ರಿ ವೇಳೆಗೆ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕತ್ವ ಇಂತಹದೊಂದು ಎಚ್ಚರಿಕೆಯನ್ನು ಹೈಕಮಾಂಡ್‌ಗೆ ನೀಡಿ, ಚುನಾವಣಾ ಮೈತ್ರಿ ಬದಲು ಫ್ರೆಂಡ್ಲಿ ಫೈಟ್‌ ಮಾಡೋಣ ಎಂಬ ವಾದ ಮಾಡಿತ್ತು. ಇದನ್ನು ಒಪ್ಪದ ಹೈಕಮಾಂಡ್‌ ಲೋಕಸಭಾ ಚುನಾವಣೆವರೆಗೂ ಮೈತ್ರಿ ಸರ್ಕಾರವಿರಲಿ, ಅನಂತರದ ಪರಿಸ್ಥಿತಿ ಆಧರಿಸಿ ನಿರ್ಧರಿಸೋಣ ಎಂಬ ಭರವಸೆ ನೀಡಿತ್ತು ಎನ್ನುತ್ತವೆ ಕಾಂಗ್ರೆಸ್‌ ಮೂಲಗಳು. ಈ ಭರವಸೆಯನ್ನು ಬಳಸಿಕೊಂಡು ನಾಯಕತ್ವ ಬದಲಾವಣೆಗೆ ಜೆಡಿಎಸ್‌ ಮನವೊಲಿಸುವಂತೆ ಹೈಕಮಾಂಡ್‌ ಮೇಲೆ ಒತ್ತಡ ಹಾಕಬಹುದು. ಆಗ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸೂಕ್ತ ಸ್ಥಾನ ಮಾನ ನೀಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಕಾಂಗ್ರೆಸ್‌ ಪಡೆಯಲು ಯತ್ನಿಸಬಹುದು (ಸಹಜವಾಗಿಯೇ ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯ ದಾವೆದಾರರಾಗುತ್ತಾರೆ).

3. ಜೆಡಿಎಸ್‌-ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಬಹುದು

ಕಾಂಗ್ರೆಸ್‌ ನಾಯಕತ್ವವು ಸರ್ಕಾರದ ಮೇಲೆ ಅತಿಯಾದ ನಿಯಂತ್ರಣ ಪಡೆಯಲು ಮುಂದಾದರೆ ಆಗ ಜೆಡಿಎಸ್‌ ಕೇಂದ್ರದ ಮೈತ್ರಿ ಕೂಟದಿಂದ ಹೊರ ಬಂದು ಬಿಜೆಪಿಯತ್ತ ಸಾಗಬಹುದು. ತನ್ಮೂಲಕ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಕೂಟ ರಾಜ್ಯದಲ್ಲಿ ಉದಯವಾಗುವಂತೆ ಮಾಡುವ ಪ್ರಯತ್ನವನ್ನು ಮಾಡಬಹುದು.