ಬೆಂಗಳೂರು(ಸೆ. 21): ನಿನ್ನೆ ಸುಪ್ರೀಂ ಕೋರ್ಟ್ ಮತ್ತೆ ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಆದೇಶ ನೀಡಿದ್ದು ರಾಜ್ಯಕ್ಕೆ ನುಂಗಲಾರದ ತುತ್ತಾದರೆ, ಇದರೊಂದಿಗೆ ಮತ್ತೊಂದು ಅಂಶವನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದ್ದು, ಅದು ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.
4 ವಾರಗಳ ಒಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿತ್ತು. ಏನಿದು ಕಾವೇರಿ ನೀರು ನಿರ್ವಹಣಾ ಮಂಡಳಿ..? ಇದರಿಂದ ರಾಜ್ಯಕ್ಕೇನು ನಷ್ಟ, ಅಮ್ಮನಿಗೇನು ಲಾಭ..? ಎನ್ನುವ ವಿಷಯವನ್ನು ನಾವು ತಿಳಿಯಲೇ ಬೇಕಾಗಿದೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದಲ್ಲಿ, ಕಾವೇರಿ ನದಿ ವಿಚಾರದಲ್ಲಿ ತಮಿಳುನಾಡಿಗೆ ಹೆಚ್ಚಿನ ಬಲ ಬಂದಂತೆ ಆಗಲಿದ್ದು, ನಮ್ಮ ರಾಜ್ಯಕ್ಕೆ ಕಾವೇರಿ ಮೇಲಿನ ಹಿಡಿತ ಕಡಿಮೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಕಾವೇರಿ ನೀರಿನ ಮೇಲೆ ಯಾವುದೇ ನಿಯಂತ್ರಣ ಇರೋದಿಲ್ಲ. ಕೃಷಿ, ನೀರಾವರಿ ತಜ್ಞರು ಸೇರಿದಂತೆ ಅಧ್ಯಕ್ಷ, ಸದಸ್ಯರನ್ನು ಕೇಂದ್ರ ಸರ್ಕಾರ ನೇಮಕ ಮಾಡಲಿದೆ. ಹಾಗಾಗಿ ಕಾವೇರಿ ನದಿಯ ಹಿಡಿತ ಸಂಪೂರ್ಣ ಕೇಂದ್ರದ ಪಾಲಾಗಲಿದ್ದು, ಇದು ಅಮ್ಮನಿಗೆ ವರದಾನವಾಗಲಿದೆ.
ಕಾವೇರಿ ಕೊಳ್ಳದ ಎಲ್ಲಾ ಜಲಾಶಯ ಕಾವೇರಿ ನೀರು ನಿರ್ವಹಣಾ ಮಂಡಳಿ ವ್ಯಾಪ್ತಿಗೆ ಸೇರಲಿದೆ. ಈ ಮಂಡಳಿ ನೀರು ಹಂಚಿಕೆ, ಬಿಡುಗಡೆ ಬಗ್ಗೆ ನಿರ್ವಹಣಾ ಮಂಡಳಿಯೇ ತೀರ್ಮಾನ ಕೈಗೊಳ್ಳುತ್ತದೆ. ಕರ್ನಾಟಕ, ತಮಿಳುನಾಡು, ಪುದುಚೇರಿ ಹಾಗೂ ಕೇರಳ ಸೇರಿದಂತೆ ನಾಲ್ಕು ರಾಜ್ಯಗಳ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ.
ಕಾವೇರಿ ನದಿ ನೀರಿನ ಮೇಲೆ ಸದ್ಯ ಇರುವ ನಿಯಂತ್ರಣವನ್ನು ರಾಜ್ಯ ಸರಕಾರ ಕಳೆದುಕೊಳ್ಳಲಿದ್ದು, ನಮ್ಮ ರಾಜ್ಯದ ರೈತರಿಗೆ ನೀರು ಬಿಡಬೇಕಾದರು ಮಂಡಳಿ ಮಂದೆ ಮಂಡಿಯೂರಿ ಕುಳಿತುಕೊಳ್ಳ ಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ನಮ್ಮಲ್ಲೇ ಹುಟ್ಟಿ, ನಮ್ಮಲ್ಲೇ ಇರುವ ಕಾವೇರಿ ಮುಂದೆ ಕೇಂದ್ರದ ಕೈ ಸೇರಿ ಅಮ್ಮನ ಮನೆ ಕಡೆಗೆ ಹರಿದರೆ ಯಾವುದೇ ಅಚ್ಚರಿಯಿಲ್ಲ.
