ಜೆಡಿಎಸ್ ರಾಜ್ಯದಲ್ಲಿ ಕಾಂಗ್ರೆಸ್‌ನ ಮೈತ್ರಿಯೊಂದಿಗೆ 12 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಈ ಸಂಬಂಧ ರಾಜ್ಯದ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಬಳಿ ಬೇಡಿಕೆ ಇಟ್ಟಿದೆ.
ಬೆಂಗಳೂರು : ಕೇಂದ್ರದ ಆಡಳಿತಾರೂಢ ಬಿಜೆಪಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೂರವಿಡಲು ಪಣತೊಟ್ಟಿರುವ ತೃತೀಯ ರಂಗದ ಭಾಗವಾಗಿರುವ ಜೆಡಿಎಸ್ ರಾಜ್ಯದಲ್ಲಿ ಕಾಂಗ್ರೆಸ್‌ನ ಮೈತ್ರಿಯೊಂದಿಗೆ 12 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಈ ಸಂಬಂಧ ರಾಜ್ಯದ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್ ಬಳಿ ಬೇಡಿಕೆ ಇಟ್ಟಿದೆ.
ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಮಾತನಾಡಿ, ಫೆಬ್ರವರಿ ಅಂತ್ಯದಲ್ಲಿ ಅಥವಾ ಮಾಚ್‌ರ್‍ನ ಮೊದಲ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೆ ನಾವು ಮೈಮರೆತು ಕುಳಿತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ಮಾಡಿದ್ದೇವೆ ಎಂದು ಸಲುಗೆ ನೀಡಿಲ್ಲ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಉಳಿವು ಮುಖ್ಯವಾಗಿದೆ. ಹೀಗಾಗಿ ಸೀಟು ಹಂಚಿಕೆ ಬಗ್ಗೆ ಚರ್ಚಿಸಿಯೇ ತೀರ್ಮಾನ ಕೈಗೊಳ್ಳುತ್ತೇವೆ.
ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಯಾವುದೇ ಸಮಸ್ಯೆ ಇಲ್ಲದಂತೆ ಸೀಟು ಹಂಚಿಕೆ ಮಾಡಿಕೊಳ್ಳುತ್ತೇವೆ. ರಾಜ್ಯದ 28 ಲೋಕಸಭೆ ಕ್ಷೇತ್ರಗಳ ಪೈಕಿ 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ನಲ್ಲಿ ಬೇಡಿಕೆ ಇಡಲಾಗುವುದು ಎಂದು ಹೇಳಿದರು.
ಜ.8ರಂದು ಸಂಸತ್ ಅಧಿವೇಶನ ಮುಗಿಯಲಿದ್ದು, ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಜ.15ರೊಳಗೆ ಸೀಟು ಹಂಚಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಯಾವ ಕ್ಷೇತ್ರ ಯಾರಿಗೆ ಹೋಗಲಿದೆಯೋ ಗೊತ್ತಿಲ್ಲ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಸೂಕ್ತ ಎಂಬ ಮಾಹಿತಿ ಸಂಗ್ರಹಿಸಲು ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಾಗುವುದು.
ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜತೆಗೂ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಜೆಡಿಎಸ್ ದೇಶದ ಇತರೆಡೆಯೂ ಸ್ಪರ್ಧಿಸಲಿದೆ. ಪಕ್ಷದ ಮುಖಂಡ ಡ್ಯಾನಿಷ್ ಅಲಿ ಉತ್ತರ ಪ್ರದೇಶದಲ್ಲಿ ಚುನಾವಣೆ ಎದುರಿಸಲಿದ್ದಾರೆ. ಅಂತೆಯೇ ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ. ಮುಂದಿನ ದಿನದಲ್ಲಿ ಬೇರೆ ರಾಜ್ಯಗಳಲ್ಲಿ ನಮ್ಮ ಜತೆ ಸೇರಲು ಹಲವು ಪ್ರಾದೇಶಿಕ ಪಕ್ಷಗಳು ಮುಂದೆ ಬಂದಿದ್ದು, ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
