ಹರಾರೆ[ಜೂ.16]: ಆರ್ಥಿಕ ಸಂಕಷ್ಟದಿಂದ ಜಿಂಬಾಬ್ವೆ ನರಳುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಅರಸಿ ಹೊರ ದೇಶಗಳಿಗೆ ವಲಸೆ ಹೋಗಲು ಮುಂದಾಗಿರುವ ಆ ದೇಶದ ಜನತೆಗೆ ಹೊಸತೊಂದು ಸಮಸ್ಯೆ ಎದುರಾಗಿದೆ. ವಿದೇಶ ಪ್ರಯಾಣಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದರೆ ಸಿಗುತ್ತಿಲ್ಲ. ಏಕೆಂದರೆ, ಪಾಸ್‌ಪೋರ್ಟ್‌ ಮುದ್ರಿಸಲು ಬೇಕಾದ ಕಾಗದ ಹಾಗೂ ಶಾಯಿ ಆಮದಿಗೂ ಸರ್ಕಾರದ ಬಳಿ ಹಣವಿಲ್ಲ!

ಜಿಂಬಾಬ್ವೆಯಲ್ಲಿ ಪಾಸ್‌ಪೋರ್ಟ್‌ ಮಾಡಿಸಲು ಕನಿಷ್ಠವೆಂದರೂ ಒಂದು ವರ್ಷ ಕಾಯಬೇಕು. ತುರ್ತು ಪಾಸ್‌ಪೋರ್ಟ್‌ ಪಡೆಯಬೇಕೆಂದರೂ ಹಲವು ತಿಂಗಳು ಕಾಯಬೇಕು. 2,80,000 ಪಾಸ್ಪೋರ್ಟ್‌ ಅರ್ಜಿಗಳು ಕಚೇರಿಯಲ್ಲೇ ಧೂಳು ತಿನ್ನುತ್ತಿವೆ.

ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿರುವ ಮುಖ್ಯ ಪಾಸ್‌ಪೋರ್ಟ್‌ ಕಚೇರಿಯಲ್ಲಿ ಜನರು ತಮ್ಮ ಅರ್ಜಿಯನ್ನು ಸಲ್ಲಿಸುವುದಕ್ಕೂ ಹಗಲು ರಾತ್ರಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕೊನೆಗೆ ಗತಿಯಲ್ಲಿದೇ ಪಾಸ್‌ಪೋರ್ಟ್‌ ಕಚೇರಿಯಲ್ಲೇ ನಿದ್ರಿಸುತ್ತಿರುವ ದೃಶ್ಯ ಸಾಮಾನ್ಯ ಎಂಬಂತಾಗಿದೆ. ತುರ್ತು ಪಾಸ್ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಒಂದು ಕಿ.ಮೀ.ಗಿಂತಲೂ ಹೆಚ್ಚಿನ ದೂರದ ಸಾಲಿನಲ್ಲಿ ನಿಂತು ಕಾಯಬೇಕು. ಒಂದೇ ವೇಳೆ ತಮ್ಮ ಪಾಳಿ ಬರದೇ ಇದ್ದರೆ, ಕಚೇರಿಯ ಹೊರಗಡೆ ವಾರಗಟ್ಟಲೇ ನಿದ್ರಿಸಬೇಕು. ಅಷ್ಟಾದರೂ 2020ಕ್ಕೆ ಪಾಸ್‌ಪೋರ್ಟ್‌ ಅರ್ಜಿ ವಿಚಾರಣೆ ದಿನಾಂಕವನ್ನು ನೀಡಲಾಗುತ್ತಿದೆ.

ಏಕೆ ಈ ಸ್ಥಿತಿ?

ಪಾಸ್ಪೋರ್ಟ್‌ಗೆ ಬೇಕಾದ ವಿಶೇಷ ಕಾಗದವನ್ನು ಆಮದು ಮಾಡಿಕೊಳ್ಳಲು ವಿದೇಶಿ ನೋಟುಗಳು ಅಭಾವ, ಶಾಯಿ ಮತ್ತು ಇತರ ಸಾಮಗ್ರಿಗಳ ಕೊರತೆ, ಯಂತ್ರೋಪಕರಣಗಳು ಕೆಟ್ಟು ಹೋಗಿರುವ ಕಾರಣದಿಂದ ಪಾಸ್ಪೋರ್ಟ್‌ ವಿತರಣೆ ವಿಳಂಬವಾಗುತ್ತಿದೆ ಎಂದು ಅಧಿಕಾಕಾರಿಗಳು ಹೇಳುತ್ತಾರೆ.

ಇನ್ನು ದೇಶದ ಹಣದುಬ್ಬರ 2009ರ ಬಳಿಕ ಶೇ.75ರಷ್ಟುಏರಿಕೆಯಾಗಿದೆ. ಇದಕ್ಕೊಂದು ಉದಾಹರಣೆ ಎಂದರೆ ಜಿಂಬಾಬ್ವೆ ಸೆಂಟ್ರಲ್‌ ಬ್ಯಾಂಕ್‌ ಒಂದು ಟ್ರಿಲಿಯನ್‌ ಡಾಲರ್‌ ನೋಟನ್ನು ಚಲಾವಣೆಗೆ ತಂದಿದೆ. ಆದರೆ, ಈ ಹಣದಿಂದ ಒಂದು ಬ್ರೆಡ್‌ ಕೂಡ ದೊರೆಯುವುದಿಲ್ಲ. ಆರ್ಥಿಕ ಸಂಕಷ್ಟಕ್ಕೆ ನಲುಗಿ ಈಗಾಗಲೇ ಲಕ್ಷಾಂತರ ಮಂದಿ ಉದ್ಯೋಗ ಅರಸಿ ಪಕ್ಕದ ದಕ್ಷಿಣ ಆಫ್ರಿಕಾ ಹಾಗೂ ಇತರ ಆಫ್ರಿಕನ್‌ ದೇಶಗಳಿಗೆ ವಸಲೆ ಹೋಗಿದ್ದಾರೆ. ಹಾಲಿ ಅಧ್ಯಕ್ಷ ಎಮ್ಮರ್ಸನ್‌ ಮನ್ಗಾಗ್ವಾ ಅವರ ಸರ್ಕಾರದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಇನ್ನಷ್ಟುಬಿಗಡಾಯಿಸಿದೆ. ಇದು ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದ್ದು, ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.