ಕೋಲಾರ (ಜೂ.15) :  ಸಂಪುಟದಲ್ಲಿರುವ ಹಾಲಿ ಸಚಿವರುಗಳ ರಾಜೀನಾಮೆ ವಿಚಾರವಾಗಿ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಸಚಿವ ಸ್ಥಾನದ ಕುರಿತಾದ ಸಾಧಕ ಭಾದಕ ಬಗ್ಗೆ ಚರ್ಚೆ ನಡೆಸಲಾಗಿದೆ. ಖಾಲಿ ಇರುವ ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಸಂಪುಟ ವಿಸ್ತರಣೆ ವೇಳೆ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದು ಕೋಲಾರದಲ್ಲಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ರಾಜೀನಾಮೆ ಕೊಡುವ ಸಂದರ್ಭದ ಬಂದರೆ ಎಲ್ಲರೂ ಸಿದ್ಧರಿರುತ್ತಾರೆ. ಸರಣಿ ಸಭೆಗಳನ್ನು ನಡೆಸಿ ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದ್ದಾರೆ. ಈ ಕುರಿತು ವರಿಷ್ಠರಲ್ಲಿ ಯಾವುದೇ ಭಿನ್ನಮತ ಇಲ್ಲ. ಕೆಲ ಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ ಆಗಿರಬಹುದು. ಆದರೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ಅವಕಾಶ ಸಿಗಲಿದೆ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರದ ಹಿತ ದೃಷ್ಟಿಯಿಂದ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಬಿಜೆಪಿಯವರು ವಾಮ ಮಾರ್ಗದ ಪ್ರಯತ್ನ ಇನ್ನು ಕೈ ಬಿಟ್ಟಿಲ್ಲ. ಆದರೆ ಸರ್ಕಾರ ಬೀಳಿಸುವುದಿಲ್ಲ ಎಂದು ಹೇಳಿಕೆ ಕೊಡುತಿದ್ದಾರೆ.   ರಾಜ್ಯ ಸರ್ಕಾರವನ್ನು ಉರುಳಿಸಬೇಕು ಎಂದು ಅವರ ವರಿಷ್ಠರಿಂದ ಸೂಚನೆ ಬಂದಿದೆ. ಇದನ್ನು ಎದುರಿಸೋಕೆ ಮೈತ್ರಿ ಪಕ್ಷದವರು ಸಜ್ಜಾಗಿದ್ದೇವೆ ಎಂದರು.