ಕೆಲವೆಡೆ ಅಭಿಷೇಕದ ನೀರಿಗೂ ಅಳಿದುಳಿದ ಒರತೆ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ. ಶೀಘ್ರದಲ್ಲೇ ಮಳೆ ಬಾರದೇ ಹೋದರೆ ದೇವರೇ ಗತಿ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಯಾವ್ಯಾವ ದೇವಾಲಯ ನೀರಿಗೆ ತೀವ್ರ ಸಮಸ್ಯೆಯಾಗಿದೆ ಎಂಬ ವಿವರ ಇಲ್ಲಿದೆ.

ಸಿದ್ದಗಂಗಾ ಮಠಕ್ಕೂ ತಟ್ಟಿದ  ಬರದ ಬಿಸಿ

10 ಸಾವಿರ ಮಕ್ಕಳಿಗೆ ಊಟ, ವಸತಿ, ಜ್ಞಾನ ನೀಡುತ್ತಿರುವ, ಪ್ರತಿನಿತ್ಯ ೨ ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡುವ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬರದ ಬಿಸಿ ತಟ್ಟಿದ್ದು, ಕುಡಿಯುವ
ನೀರಿಗೂ ತತ್ವಾರ ಶುರುವಾಗಿದೆ. ಸದ್ಯ ಇಲ್ಲಿ ನೀರು ಪೂರೈಸಲು ಇರುವ ಏಕೈಕ ಮಾರ್ಗವೆಂದರೆ ಮಹಾನಗರಪಾಲಿಕೆ ಕೊಡ ಮಾಡುವ ನಲ್ಲಿ ನೀರು ಮಾತ್ರ.

ಇದೀಗ ಮಠಕ್ಕಾಗಿ ಪ್ರತಿದಿನ ಪಾಲಿಕೆ ನೀರು ಬಿಡುತ್ತಿದ್ದರೂ ಅದರ ಪ್ರಮಾ ಣ ಕಡಿಮೆಯಾಗಿದೆ. ಹೀಗಾಗಿ ಮಠಕ್ಕೆ ಯಾವುದಾದರೂ ಶಾಶ್ವತ ಜಲಮೂಲ ಕಲ್ಪಿಸಬೇಕೆಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ತುಮಕೂರು ನಗರ ಹಾಗೂ ಗ್ರಾಮಾಂತರ ಶಾಸಕರಿಗೆ ಪತ್ರ ಬರೆದಿದ್ದಾರೆ. 

ವಿಶ್ವ ವಿಖ್ಯಾತ ಹಂಪಿಯಲ್ಲೂ ಪ್ರವಾಸಿಗರಿಗೆ ಬರದ ಬಿಸಿ

ಬಳ್ಳಾರಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ನೀರಿನ ಸಮಸ್ಯೆ ತೀವ್ರ ಉಲ್ಬಣಗೊಂಡಿಲ್ಲವಾದರೂ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಇದರ ಬಿಸಿ ತಟ್ಟಿದೆ. ವಿಶ್ವವಿಖ್ಯಾತ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನೀರಿಗೆ ಸಮಸ್ಯೆಯಾಗದಿರಲಿ ಎಂದು ಬೋರ್‌ವೆಲ್ ಕೊರೆಸಲಾಗಿದೆ. ಆದರೆ, ಸಮರ್ಪಕ ನೀರು ಸಿಗುತ್ತಿಲ್ಲ. ಹೀಗಾಗಿ, ಮೊದಲಿನಷ್ಟು ಹೆಚ್ಚು ನೀರು ಬಳಕೆ ಮಾಡುವಂತಿಲ್ಲ.

ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನದಲ್ಲೂ ನೀರಿನ ಸಮಸ್ಯೆ ಇದೆ. ಪ್ರತಿ ಶುಕ್ರವಾರ ಹಾಗೂ ಮಂಗಳವಾರ ಸಾವಿರಾರು ಭಕ್ತರು ಪೂಜೆಗೆಂದು ಆಗಮಿಸುತ್ತಿದ್ದು, ಕುಡಿಯುವ ನೀರು ಹಾಗೂ ಬಳಕೆ ನೀರಿಗಾಗಿ ಇಲ್ಲಿ ಒದ್ದಾಟವಿದೆ. ಹೀಗಾಗಿ, ಹೊರಗಡೆಯಿಂದ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. 

ಹುಲಿಗೆಮ್ಮನ ಸನ್ನಿಧಿಯಲ್ಲಿಸ್ನಾನಕ್ಕೆ ನಲ್ಲಿ ನೀರೇ ಗತಿ

ಉತ್ತರ ಕರ್ನಾಟಕದ ಆರಾಧ್ಯದೇವತೆ ಎಂದೇ ಹೆಸರುವಾಸಿಯಾಗಿರುವ ಕೊಪ್ಪಳದ ಹುಲಿಗೆಮ್ಮ ದೇವಿಯ ಸನ್ನಿಧಾನಕ್ಕೆ ಬರುವ ಭಕ್ತಾದಿಗಳ ಪುಣ್ಯಸ್ನಾನಕ್ಕೆ ನಲ್ಲಿ ನೀರು ಆಸರೆಯಾಗಿದೆ. ಪಕ್ಕದ ತುಂಗಭದ್ರಾ ಜಲಾಶಯದಲ್ಲಿ ನೀರು ಖಾಲಿಯಾಗಿರುವುದರಿಂದ ತುಂಗಭದ್ರಾ ನದಿಗೆ ನೀರು ಬಿಟ್ಟಿಲ್ಲ. ನದಿಯೆಲ್ಲ ಒಣಗಿ ಹೋಗಿರುವುದರಿಂದ ಭಕ್ತರು ದೇವಸ್ಥಾನದ ಹತ್ತಿರವಿರುವ ನಲ್ಲಿ ನೀರಿನಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.

ದೇವಾಲಯದಿಂದ ಬೋರ್ ವೆಲ್ ಕೊರೆಯಿಸಲಾಗಿದ್ದು, ಶವರ್‌ಬಾತ್ ವ್ಯವಸ್ಥೆ ಮಾಡಲಾಗಿದೆ. ಆದರೆ, ಈ ದೇವಿಯ ಭಕ್ತರು ನದಿಯಲ್ಲಿ ಸ್ನಾನ ಮಾಡಿ, ದೇವರ ದರ್ಶನ ಪಡೆಯುವುದು ವಾಡಿಕೆ. ಭೀಕರ ಬರ ಹಿನ್ನೆಲೆಯಲ್ಲಿ ವಿಧಿಯಿಲ್ಲದೇ ನಲ್ಲಿ ನೀರಿನಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.

ಘತ್ತರಗಿಯಲ್ಲಿ ಕೊಳಕು ನೀರಲ್ಲೇ ಪುಣ್ಯಸ್ನಾನ!

ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಘತ್ತರಗಿ ಹರಿಯುವ ಭೀಮೆ ಸಂಪೂರ್ಣವಾಗಿ ಬತ್ತಿ ಹೋಗಿದ್ದರಿಂದ ಹನಿ ನೀರೂ ಸಿಗದಂತಾಗಿದೆ. ಅಲ್ಲಲ್ಲಿ ಕಲ್ಲು ಬಂಡೆಗಳ ನಡುವಲ್ಲಿ ಪಾಚಿಗಟ್ಟಿದ ನೀರು ನಿಂತಿದೆ. ಅದು ಕೂಡ ಬಿಸಿಲಿನ ಪ್ರಖರತೆಗೆ ಒಣಗಿ ಹೋಗುವ ಹಂತದಲ್ಲಿದೆ.

ಈ ಪಾಚಿಗಟ್ಟಿದ ನೀರಿಗೆ ಗ್ರಾಮಸ್ಥರು ದಿನಾಲು ಸ್ನಾನ ಮಾಡಿದ, ಬಟ್ಟೆ, ಪಾತ್ರೆ ತೊಳೆದ ನೀರು ಸೇರಿಕೊಳ್ಳುತ್ತಿದೆ. ಹೀಗಾಗಿ ಇಲ್ಲಿನ ಭಾಗ್ಯವಂತಿ ದೇವಿ ದರ್ಶನಕ್ಕೆ ಬರುವ ಭಕ್ತರು, ದೇವರ ಮೇಲಿನ ಭಕ್ತಿಗೆ, ನಂಬಿಕೆಗೆ ಪಾಚಿಗಟ್ಟಿದ ಚರಂಡಿ ನೀರು ಮಿಶ್ರಣವಾದ ನೀರಲ್ಲೇ ಪುಣ್ಯಸ್ನಾನ ಮಾಡುತ್ತಿದ್ದಾರೆ. 

ಕೊಳಚೆ ನೀರಿನಿಂದಲೇ ಕಂಗಳೇಶ್ವರಗೆ ಅಭಿಷೇಕ 

ಯಾದಗಿರಿಯ ಭೀಮಾ ನದಿ ಪಾತ್ರದಲ್ಲೇ ಇರುವ ಕಂಗಳೇಶ್ವರ ಹಾಗೂ ಹನುಮಾನ್ ಮಂದಿರಗಳಿಗೆ ನೀರಿನ ತಾಪತ್ರಯ ಎದುರಾಗಿದೆ. ಕೊಳಚೆ ನೀರು ಮಿಶ್ರಣವಾಗಿರುವ ನಿಂತ ನೀರೇ ದೇವಾಲಯಗಳ ನಿತ್ಯಪೂಜೆಗೂ ಬಳಕೆಯಾಗುತ್ತಿದೆ. ಕುಡಿಯಲು, ಸ್ನಾನಕ್ಕೆ, ನಿತ್ಯ ಬಳಕೆಗೂ ಈ ನೀರೇ ಅನಿವಾರ್ಯ ವಾಗಿರುವುದು ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಪುರಾಣ ಪ್ರಸಿದ್ಧ, ಹಿಂದೂ ಮುಸ್ಲಿಂ ಭಾವಕೈತೆಯ ಸಂಕೇತವಾದ ಕೃಷ್ಣಾ ತೀರದ ಜಿಲ್ಲೆಯ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲೂ ಇದೇ ಪರಿಸ್ಥಿತಿ. 

ಗಾಣಗಾಪುರ ಸಂಗಮದಲ್ಲಿ ಬಕೆಟ್ ನೀರಿಗೆ ₹50!

ಕಲಬುರಗಿ ಜಿಲ್ಲೆಯ ಪ್ರಸಿದ್ಧ ಗಾಣಗಾಪುರ ಭೀಮಾ- ಅಮರ್ಜಾ ನದಿಗಳ ಸಂಗಮ ಕ್ಷೇತ್ರವಾಗಿದ್ದರೂ ಇಲ್ಲಿಗೆ ಬರುವ ಭಕ್ತರಿಗೆ ಚೊಂಬು ನೀರೂ ಸಿಗದಂತಾಗಿದೆ. ಇಲ್ಲಿ ನಿತ್ಯ ಕರ್ನಾಟಕ, ಮಹಾರಾಷ್ಟ್ರದಿಂದ ಸಾವಿರಾರು ಭಕ್ತರು ಬಂದು ಹೋಗುತ್ತಾರೆ.

ಉಭಯ ನದಿಗಳಲ್ಲಿ ನೀರಿಲ್ಲವಾದ್ದರಿಂದ ಪುಣ್ಯಸ್ನಾನ ಸಾಧ್ಯವಾಗುತ್ತಿಲ್ಲ. ನೀರನ್ನು ಖರೀದಿಸಿ ಸ್ನಾನ ಮಾಡಬೇಕೆಂದರೆ ಬಕೆಟ್ ನೀರಿಗೆ ೫೦ ರು. ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿರುವುದರಿಂದ ಭಕ್ತರ ಸಂಖ್ಯೆ ಕುಸಿತ ಕಂಡಿದೆ. ಇದೇ ಜಿಲ್ಲೆಯ ಚೆನ್ನಕೇಶವ ದೇವರು ಹಾಗೂ ರೇಣುಕಾ ಯಲ್ಲಮ್ಮದೇವಿ ನೆಲೆ ನಿಂತಿರುವ ಮಣ್ಣೂರಲ್ಲಿಯೂ ನೀರಿನ ಬರ ಎದುರಾಗಿದೆ.