ಲಿಂಗಾಯತ ಧರ್ಮ ಬೇಡ: ಸಿಎಂಗೆ ಗುಪ್ತಚರ ಎಚ್ಚರಿಕೆ

Warning To CM Siddaramaiah
Highlights

ವಿಧಾನಸಧಾ ಚುನಾವಣೆ ಹೊಸ್ತಿನಲ್ಲಿ ಜಾತಿ-ಧರ್ಮದ ಸಂಕಷ್ಟಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುಪ್ತದಳದ ವರದಿ ಮತ್ತಷ್ಟುಚಿಂತೆಗೀಡು ಮಾಡಿದೆ. 

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು : ವಿಧಾನಸಧಾ ಚುನಾವಣೆ ಹೊಸ್ತಿನಲ್ಲಿ ಜಾತಿ-ಧರ್ಮದ ಸಂಕಷ್ಟಕ್ಕೆ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುಪ್ತದಳದ ವರದಿ ಮತ್ತಷ್ಟುಚಿಂತೆಗೀಡು ಮಾಡಿದೆ. ಮುಖ್ಯಮಂತ್ರಿಗಳಿಗೆ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ತಜ್ಞರ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳದಂತೆ ಗುಪ್ತದಳ ಮುಖ್ಯಸ್ಥರು ಸ್ಪಷ್ಟಸಲಹೆ ನೀಡಿದ್ದಾರೆ. ಒಂದೊಮ್ಮೆ ಒಪ್ಪಿಕೊಂಡರೆ ಸಾಮಾಜಿಕ ಅಶಾಂತಿ ಹಾಗೂ ಕಾನೂನು-ಸುವ್ಯವಸ್ಥೆ ಸಮಸ್ಯೆ ತಲೆದೋರಬಹುದು ಎಂದು ಎಚ್ಚರಿಸಿದ್ದಾರೆ.

ಈ ಗುಪ್ತದಳ ವರದಿ ಹಿನ್ನೆಲೆಯಲ್ಲಿ ಲಿಂಗಾಯತ ಧರ್ಮ ವರದಿ ಅಂಗೀಕರಿಸುವ ಕುರಿತು ಮುಖ್ಯಮಂತ್ರಿಗಳು ಸ್ಥಿತಿ ಡೋಲಾಯಮಾನವಾಗಿದ್ದು, ಸೋಮವಾರ ಬಹುನಿರೀಕ್ಷಿತ ರಾಜ್ಯ ಸಚಿವರ ಸಂಪುಟದಲ್ಲಿ ಕೂಡಾ ಧರ್ಮ ಸಂಕಟವು ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆಗಳು ಕ್ಷೀಣಿಸಿವೆ ಎಂದು ಗುಪ್ತದಳದ ವಿಶ್ವಸನೀಯ ಮೂಲಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿವೆ.

‘ವೀರಶೈವ-ಲಿಂಗಾಯತ ಸಮುದಾಯದ ಪ್ರಶ್ನಾತೀತ, ಸರ್ವೋಚ್ಚ ಗುರು ಎಂದು ಹೇಳಲಾಗುವ ಸಿದ್ಧಗಂಗಾ ಮಠದ ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ, ಹಳೆ ಮೈಸೂರು ಭಾಗದಲ್ಲಿ ರಾಜಕೀಯ ಮತ್ತು ಆರ್ಥಿಕವಾಗಿ ಬಲಾಢ್ಯವಾಗಿರುವ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಸಹ ಲಿಂಗಾಯತ ಧರ್ಮದ ವಿಚಾರದಲ್ಲಿ ಸರ್ಕಾರ ನಡೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಈ ಇಬ್ಬರು ಹಿರಿಯ ಸ್ವಾಮೀಜಿಗಳ ಅಭಿಪ್ರಾಯ ಇದು ಎಂದೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅವರ ಹೆಸರಲ್ಲಿ ಸಂದೇಶಗಳನ್ನು ಹರಿ ಬಿಟ್ಟಿದ್ದು, ಅದು ಕ್ರಮೇಣ ಜನಾಭಿಪ್ರಾಯವಾಗುತ್ತಿದೆ. ಹೊರ ನೋಟಕ್ಕೆ ಲಿಂಗಾಯತ ಧರ್ಮ ಹೋರಾಟವು ಕಾಣಿಸುವಷ್ಟುಸುಲಭವಾಗಿಲ್ಲ. ತೀರಾ ಭಾವನಾತ್ಮಕ ವಿಷಯವಾಗಿ ಮಾರ್ಪಟ್ಟಿದೆ. ಅಂಕಿ-ಅಂಶಗಳು ಅಥವಾ ದಾಖಲೆಗಳ ಆಧಾರದಲ್ಲಿ ಪ್ರತ್ಯೇಕಿಸುವುದು ಈ ಹಂತದಲ್ಲಿ ಔಚಿತ್ಯಪೂರ್ಣವಾಗಿಲ್ಲ. ಆ ಸಮುದಾಯಗಳ ಮಧ್ಯೆ ವಧು-ವರ ಕೊಟ್ಟು ತೆಗೆಕೊಳ್ಳುವಷ್ಟುಸಂಬಂಧಗಳು ಗಾಢವಾಗಿವೆ’ ಎಂದು ಗುಪ್ತದಳ ಹೇಳಿದೆ.

ಲಿಂಗಾಯತ ಧರ್ಮ ಸಲ್ಲದು:

‘ಸ್ಥಿತಿ ಹೀಗಿದ್ದಾಗ ವೀರಶೈವ-ಲಿಂಗಾಯತ ಸಮುದಾಯವನ್ನು ಪ್ರತ್ಯೇಕಿಸುವ ವಿಷಯದಲ್ಲಿ ರಾಜ್ಯ ಸರ್ಕಾರವು ಮಧ್ಯಪ್ರವೇಶಿಸದೆ ಅಂತರ ಕಾಯ್ದುಕೊಳ್ಳುವುದು ಒಳಿತು. ಸ್ವತಂತ್ರ ಧರ್ಮ ಪಡೆಯುವ ವಿಷಯದಲ್ಲಿ ಲಿಂಗಾಯತ ವರ್ಗದ ಬಹುತೇಕರಲ್ಲಿ ಅಸಮಾಧಾನವಿದೆ. ಈ ಹೋರಾಟದ ಪ್ರಾರಂಭದಲ್ಲಿ ಕಾಣಿಸಿಕೊಂಡ ತೀವ್ರತೆ ಈಗಿಲ್ಲ. ಚುನಾವಣೆ ಎದುರಾಗಿರುವ ಹೊತ್ತಿನಲ್ಲೇ ಪ್ರತ್ಯೇಕ ಧರ್ಮ ವಿಚಾರದಲ್ಲಿ ಕೈ ಹಾಕಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು’ ಎಂದು ಮುಖ್ಯಮಂತ್ರಿಗಳಿಗೆ ಗುಪ್ತದಳ ಡಿಜಿಪಿ ಅಶಿತ್‌ ಮೋಹನ್‌ ಪ್ರಸಾದ್‌ ಸ್ಪಷ್ಟವಾಗಿ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಸ್ವತಂತ್ರದ ಧರ್ಮದ ಸಂಬಂಧ ವೀರಶೈವ-ಲಿಂಗಾಯತ ಸಮುದಾಯದ ಪ್ರಾಬಲ್ಯದ ಪ್ರತಿ ವಿಧಾನಸಭಾ ಕ್ಷೇತ್ರವಾರು ವಾಸ್ತವ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಗುಪ್ತದಳಕ್ಕೆ ಮುಖ್ಯಮಂತ್ರಿ ಸೂಚಿಸಿದ್ದರು. ಅದರಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಾಹಿತಿ ಹೆಕ್ಕಿದ ಗುಪ್ತದಳವು, ಅಲ್ಲಿ ವಾಸ್ತವ ಚಿತ್ರಣ ವರದಿಯನ್ನು ಮುಂದಿಟ್ಟು ಮುಖ್ಯಮಂತ್ರಿಗಳಿಗೆ ವಿವರಿಸಿದೆ. ಈ ವರದಿ ಹಿನ್ನೆಲೆಯಲ್ಲಿ ಬುಧವಾರ ನಡೆಯಬೇಕಿದ್ದ ಸಂಪುಟ ಸಭೆಯನ್ನು ದಿಢೀರ್‌ ರದ್ದುಪಡಿಸಿದ ಮುಖ್ಯಮಂತ್ರಿಗಳು, ಸೋಮವಾರ ಕೂಡ ಸ್ಪಷ್ಟನಿಲುವು ತಾಳುವ ಅನುಮಾನವಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಲಿಂಗಾಯತ ಧರ್ಮದ ವಿಚಾರದಲ್ಲಿ ಸಚಿವರ ಸಂಪುಟದ ಆ ವರ್ಗದ ಪ್ರತಿನಿಧಿಸುವ ಮಂತ್ರಿಗಳಲ್ಲಿ ಒಮ್ಮತ ಮೂಡಿಲ್ಲ. ಕಳೆದ ಸಚಿವ ಸಂಪುಟ ಸಭೆಯಲ್ಲಿ ನಾಲ್ಕು ತಾಸು ಪ್ರತ್ಯೇಕ ಧರ್ಮದ ಕುರಿತು ಆ ಸಮುದಾಯದ ಸಚಿವರ ನಡುವೆ ತೀವ್ರ ಸ್ವರೂಪದ ಚರ್ಚೆ ನಡೆಯಿತು. ಒಂದು ಹಂತದಲ್ಲಿ ಸಭೆಯು 7 ಗಂಟೆಗೆ ಮುಕ್ತಾಯವಾಗಬಹುದು ಎಂದು ಅಂದಾಜಿಸಿದ್ದ ಮುಖ್ಯಮಂತ್ರಿಗಳಿಗೆ, ಸಚಿವರ ಪರಸ್ಪರ ವಾಗ್ವಾದ ಅಚ್ಚರಿ ಮೂಡಿಸಿತು. ಮಂತ್ರಿಗಳನ್ನು ಸಮಾಧಾನಪಡಿಸುವುದು ಅವರಿಗೆ ತ್ರಾಸದಾಯವಾವಾಯಿತು. ಇದಾದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವೀರಶೈವ-ಲಿಂಗಾಯತ ಸಮುದಾಯದ ಸ್ವಾಮೀಜಿಗಳ ನಿಯೋಗವು ಸಹ ಮನವಿ ಮಾಡಿದೆ. ಈ ಬೆಳವಣಿಗೆ ಬಗ್ಗೆ ಸಹ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸದಾಶಿವ ಆಯೋಗ ವರದಿ ಬಗ್ಗೆಯೂ ಎಚ್ಚರಿಕೆ

ಅದೇ ರೀತಿ ಪರಿಶಿಷ್ಟಜಾತಿಗಳ ಒಳ ಮೀಸಲಾತಿ ಸಂಬಂಧ ನ್ಯಾ.ಸದಾಶಿವ ಆಯೋಗದ ವರದಿ ಅಂಗೀಕಾರ ವಿಚಾರದಲ್ಲೂ ಸರ್ಕಾರವು ಸೂಕ್ಷ್ಮವಾಗಿ ಹೆಜ್ಜೆಯಿಡುವಂತೆ ಎಚ್ಚರಿಸಿರುವ ಗುಪ್ತದಳವು, ಈ ವರದಿಯನ್ನು ಅಂಗೀಕರಿಸಿದರೆ ರಾಜಕೀಯವಾಗಿ ಪ್ರತಿಕೂಲ ಪರಿಣಾಮ ಎದುರಿಸಬೇಕಾಗಬಹುದು ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ಇಲ್ಲಿ ಬಲಗೈ ಸಮುದಾಯವು ರಾಜಕೀಯ ಮತ್ತು ಆರ್ಥಿಕವಾಗಿ ಪ್ರಬಲವಾಗಿದೆ. ಹಾಗಾಗಿ ಆ ಸಮುದಾಯವು ಮುನಿಸಿಕೊಂಡರೆ ವಿರೋಧ ಪಕ್ಷಗಳು ಅದನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದು. ಇದರಿಂದ ಮೀಸಲಾತಿ ವಿಷಯವನ್ನು ಕಾನೂನು ತಜ್ಞರ ಪರಿಧಿಗೊಳಪಡಿಸಿ ಯಥಾಸ್ಥಿತಿ ಮುಂದುವರೆಸುವುದು ಯೋಚಿತವಾಗಿದೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.

loader