ಮುಖ್ಯಮಂತ್ರಿ ಕುಮಾರಸ್ವಾಮಿ - ಬಿಎಸ್ ವೈ ನಡುವೆ ದಾಖಲೆ ವಾರ್

War Between CM HD Kumaraswamy And BS Yeddyurappa
Highlights

ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡುವ ವಿಚಾರವಾಗಿ ಚರ್ಚಿಸುವ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ನಡುವೆ ತೀವ್ರ ಜಟಾಪಾಟಿ ನಡೆದಿದೆ.

ವಿಧಾನಸಭೆ :  ಸರ್ಕಾರದಿಂದ ರೈತರ ಸಾಲ ಮನ್ನಾ ಮಾಡುವ ವಿಚಾರವಾಗಿ ಚರ್ಚಿಸುವ ವೇಳೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ನಡುವೆ ತೀವ್ರ ಜಟಾಪಾಟಿ ನಡೆಯಿತು.

ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿದ ಯಡಿಯೂರಪ್ಪ, ಎಚ್‌.ಡಿ. ಕುಮಾರಸ್ವಾಮಿ ಅವರು ಚುನಾವಣೆಗೂ ಮೊದಲು ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ ಹಾಗೂ ಖಾಸಗಿಯವರ ಬಳಿ ರೈತರು ಪಡೆದಿರುವ ಮೀಟರ್‌ ಬಡ್ಡಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಇದೀಗ ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲವೇ ಸಿಗುತ್ತಿಲ್ಲ. ಯಾವಾಗ ಮನ್ನಾ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಈ ವೇಳೆ ಸ್ಪಷ್ಟನೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ, ನಾನು ಖಾಸಗಿಯವರಿಂದ ಪಡೆದ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದರೆ ದಾಖಲೆ ನೀಡಿ. ಖಾಸಗಿಯವರಿಂದ ಯಾರು ಎಷ್ಟುಸಾಲ ಪಡೆದಿದ್ದಾರೆ ಎಂಬ ಮಾಹಿತಿಯಾದರೂ ಸಿಗುತ್ತಾ? ನಾನು ಹೇಳಿದ್ದು ಕಾನೂನುಬಾಹಿರವಾಗಿ ಮೀಟರ್‌ ಬಡ್ಡಿ ವಸೂಲಿ ಮಾಡುತ್ತಿರುವ ಬಗ್ಗೆ ಏನು ಮಾಡಬಹುದು ಎಂಬುದನ್ನು ಚಿಂತನೆ ಮಾಡುತ್ತೆನೆ ಎಂದು ಅಷ್ಟೇ ಎಂದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಬಂಡೆಪ್ಪ ಕಾಶೆಂಪೂರ್‌, ಮೀಟರ್‌ ಬಡ್ಡಿ ವಸೂಲಿ ಮಾಡುವ ಖಾಸಗಿ ಸಾಲದ ಮೇಲೆ ಕಡಿವಾಣಕ್ಕೆ ಕೇರಳದಲ್ಲಿ ಹೊಸ ಕಾನೂನು ತಂದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾತು ಹದ್ದುಬಸ್ತಿನಲ್ಲಿರಲಿ:

ಮಾತು ಮುಂದುವರೆಸಿದ ಕುಮಾರಸ್ವಾಮಿ ಅವರು, ಯಡಿಯೂರಪ್ಪ ಹೇಗಂದರೆ ಹಾಗೆ ಮಾತನಾಡಬಾರದು. ನಿಮ್ಮ ಮಾತು ಹದ್ದುಬಸ್ತಿನಲ್ಲಿರಲಿ. ನೀವು ಮುಖ್ಯಮಂತ್ರಿಯಾಗಿದ್ದಾಗ ಏನೇನು ಭರವಸೆ ನೀಡಿದ್ದಿರಿ, ಬಳಿಕ ಏನು ಮಾಡಿದಿರಿ ಎಂಬುದು ನನಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರದ ವೇಳೆ ಮುಖ್ಯಮಂತ್ರಿಯಾಗಿ ಎಂಟು ದಿನ ಇದ್ದರೂ ರೈತರ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದೆ ಎಂದರು.

ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ ಕುಮಾರಸ್ವಾಮಿ, ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ರಾಜ್ಯಪಾಲರ ಭಾಷಣದಲ್ಲಿ ಸಾಲ ಮನ್ನಾ ಬಗ್ಗೆ ಒಂದು ಸಾಲು ಬರೆದಿದ್ದರೆ, ಅದನ್ನು ಸಚಿವ ಸಂಪುಟ ಸಭೆಯಲ್ಲಿ ಹಟ ಹಿಡಿದು ತೆಗೆಸಿದ್ದು ನೀವು. ಸಾಲ ಮನ್ನಾ ಬಗ್ಗೆ ನೋಟು ಪ್ರಿಂಟ್‌ ಮಾಡುವುದಿಲ್ಲ ಎಂದಿದ್ದಿರಿ. ಎಲ್ಲವೂ ಜನರಿಗೆ ನೆನಪಿದೆ ಎಂದು ಟಾಂಗ್‌ ನೀಡಿದರು.

ಪ್ರತ್ಯುತ್ತರ ನೀಡಿದ ಯಡಿಯೂರಪ್ಪ, ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದ್ದಕ್ಕೆ ನಿಮ್ಮ ತಂದೆಯವರು ಅವಕಾಶ ಮಾಡಿಕೊಡಲಿಲ್ಲ ಎಂದು ಎಚ್‌.ಡಿ. ದೇವೇಗೌಡ ಅವರ ಬಗ್ಗೆ ಆರೋಪ ಮಾಡಿದರು.

ಈ ವೇಳೆ ಸಿಡಿಮಿಡಿಗೊಂಡ ಸಚಿವ ಎಚ್‌.ಡಿ. ರೇವಣ್ಣ, ಸಾಕ್ಷ್ಯಾಧಾರಗಳಿಲ್ಲದೆ ಮಾತನಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಪ್ರವೇಶ ಮಾಡಿದ ಸ್ಪೀಕರ್‌, ಸದನದಲ್ಲಿ ಇಲ್ಲದವರ ಬಗ್ಗೆ ಮಾತನಾಡಬೇಡಿ ಈ ವಿಷಯ ಇಲ್ಲಿಗೆ ಬಿಡಿ ಎಂದು ಜಟಾಪಟಿಗೆ ತೆರೆ ಎಳೆದರು.

ಕುಮಾರಸ್ವಾಮಿ ಅವರು ಮಹಾಗಠಬಂಧನ್‌ ನೆಪದಲ್ಲಿ ತೆಲಂಗಾಣ ಹಾಗೂ ಆಂಧ್ರಪ್ರದೇಶದ ಜತೆ ಸಖ್ಯ ಬೆಳೆಸುತ್ತಿದ್ದಾರೆ. ಇದರಿಂದ ಉತ್ತರ ಹಾಗೂ ಮಧ್ಯ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಹಿನ್ನಡೆ ಉಂಟಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆ, ಎತ್ತಿನ ಹೊಳೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ನಷ್ಟಉಂಟಾಗಲಿದೆ.

-ಬಿ.ಎಸ್‌.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ

loader