ಗಂಗಾವತಿ ತಾಲೂಕಿನ ವಿರೂಪಪುರ ಗ್ರಾಮದ ಸರ್ವೆ ನಂಬರ್​ 53ರಲ್ಲಿ 12 ಎಕರೆ ವಿಸ್ತೀರ್ಣ ಜಾಗದಲ್ಲಿ ಇಂಜನಿಯರಿಂಗ್​ ಕಾಲೇಜು ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು 2011ರಲ್ಲಿ ವಿಟಿಯುಗೆ ವಹಿಸಲಾಗಿತ್ತು. ಕಟ್ಟಡ ಮತ್ತು ಇತರೆ ಕಾಮಗಾರಿಗಳಿಗೆ ಒಟ್ಟು 22.47 ಲಕ್ಷ ರೂ.ಗಳ ಅಂದಾಜು ವೆಚ್ಚ ನಿಗದಿಯಾಗಿತ್ತು. ವಿಟಿಯು ಈ ಕಾಮಗಾರಿಯನ್ನು ಬೆಂಗಳೂರು ಮೂಲದ ಮೆ.ರೈಟ್ಸ್​ ಕಂಪನಿಗೆ ವಹಿಸಿಕೊಟ್ಟಿತ್ತು.

ಬೆಂಗಳೂರು(ಫೆ.14): ಪ್ರಾದೇಶಿಕ ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿರುವ ಇಂಜಿನಿಯರಿಂಗ್​ ಶಿಕ್ಷಣ ವಿಸ್ತರಣೆ ಯೋಜನೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿವೆ.

ಗಂಗಾವತಿ ತಾಲೂಕಿನ ವಿರೂಪಪುರ ಗ್ರಾಮದಲ್ಲಿ ಇಂಜಿನಿಯರಿಂಗ್​ ಕಾಲೇಜು ಕಟ್ಟಡ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾಮಗಾರಿಗೆ ಗುತ್ತಿಗೆದಾರ ಕಂಪನಿಗೆ ಪಾವತಿಸಿರುವ ಮೊತ್ತಕ್ಕೂ ಮತ್ತು ಯೋಜನೆಯ ಅಂದಾಜು ವೆಚ್ಚದ ಮಧ್ಯೆ ಅಜಗಜಾಂತರ ವ್ಯತ್ಯಾಸಗಳು ಕಂಡು ಬಂದಿವೆ. ಅಂದಾಜು ವೆಚ್ಚಕ್ಕಿಂತ ನಿರೀಕ್ಷೆಗೂ ಮೀರಿ ಸಾವಿರ ಕೋಟಿ ರೂಪಾಯಿಯನ್ನು ವಿಟಿಯು ಪಾವತಿಸಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ವಿಶ್ವವಿದ್ಯಾಲಯಗಳಲ್ಲಿ 500 ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ವಿಟಿಯು ಪ್ರಕರಣ ಹೊರಬಿದ್ದಿದೆ.

ಗಂಗಾವತಿ ತಾಲೂಕಿನ ವಿರೂಪಪುರ ಗ್ರಾಮದ ಸರ್ವೆ ನಂಬರ್​ 53ರಲ್ಲಿ 12 ಎಕರೆ ವಿಸ್ತೀರ್ಣ ಜಾಗದಲ್ಲಿ ಇಂಜನಿಯರಿಂಗ್​ ಕಾಲೇಜು ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು 2011ರಲ್ಲಿ ವಿಟಿಯುಗೆ ವಹಿಸಲಾಗಿತ್ತು. ಕಟ್ಟಡ ಮತ್ತು ಇತರೆ ಕಾಮಗಾರಿಗಳಿಗೆ ಒಟ್ಟು 22.47 ಲಕ್ಷ ರೂ.ಗಳ ಅಂದಾಜು ವೆಚ್ಚ ನಿಗದಿಯಾಗಿತ್ತು. ವಿಟಿಯು ಈ ಕಾಮಗಾರಿಯನ್ನು ಬೆಂಗಳೂರು ಮೂಲದ ಮೆ.ರೈಟ್ಸ್​ ಕಂಪನಿಗೆ ವಹಿಸಿಕೊಟ್ಟಿತ್ತು.

22.47 ಲಕ್ಷ ರೂ.ಅಂದಾಜು ವೆಚ್ಚದ ಕಾಮಗಾರಿ ವಹಿಸಿಕೊಂಡಿದ್ದ ರೈಟ್ಸ್ ಕಂಪನಿಗೆ ವಿಟಿಯು 1,000 ಕೋಟಿ ರೂ.ಪಾವತಿಸಿದೆ ಎಂದು ವಿಟಿಯು ಅಧಿಕಾರಿಗಳು ಇಲಾಖೆಗೆ ತಿಳಿಸಿದ್ದಾರೆ. ಇನ್ನು, ಇದೇ ರೈಟ್ಸ್​ ಕಂಪನಿಗೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಿ 2015ರ ಜುಲೈ 27ರಂದು ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ವಿಟಿಯು ನಮೂದಿಸಿರುವ ಮೊತ್ತಗಳಲ್ಲಿ ಕಂಡು ಬಂದಿರುವ ವ್ಯತ್ಯಾಸದ ಬಗ್ಗೆ ಸರ್ಕಾರಿ ಆದೇಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಮಂಜಸವಾದ ಉತ್ತರ ಪಡೆದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಸಲ್ಲಿಸಬೇಕು ಎಂದು ಇಲಾಖೆಯ ಆಂತರಿಕ ಆರ್ಥಿಕ ಸಲಹೆಗಾರಾದ ಅಪರ್ಣಾ ಪಾವಟೆ ವಿಟಿಯುಗೆ ಸೂಚಿಸಿದ್ದಾರೆ.

ವರದಿ: ಜಿ.ಮಹಾಂತೇಶ್, ಸುವರ್ಣ ನ್ಯೂಸ್