ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ವೋಲ್ವೋ ಬಸ್‌ಗಳ ಟಿಕೆಟ್ ದರ ಕಡಿತ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆ ಶೇ.10ರಷ್ಟು ಏರಿಕೆಯಾಗಿದೆ! ವಿಚಿತ್ರ ಸಂಗತಿಯೆಂದರೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದರೂ ವೋಲ್ವೋ ಬಸ್ ಆದಾಯ ನಿತ್ಯ ಎರಡು ಲಕ್ಷ ರು. ಕುಸಿಯುತ್ತಿದೆ.
ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ವೋಲ್ವೋ ಬಸ್ಗಳ ಟಿಕೆಟ್ ದರ ಕಡಿತ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆ ಶೇ.10ರಷ್ಟು ಏರಿಕೆಯಾಗಿದೆ! ವಿಚಿತ್ರ ಸಂಗತಿಯೆಂದರೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದರೂ ವೋಲ್ವೋ ಬಸ್ ಆದಾಯ ನಿತ್ಯ ಎರಡು ಲಕ್ಷ ರು. ಕುಸಿಯುತ್ತಿದೆ.
ಬಿಎಂಟಿಸಿಯು ಜನವರಿ 1ರಿಂದ ಅನ್ವಯವಾಗುವಂತೆ ವೋಲ್ವೋ ಬಸ್ ಟಿಕೆಟ್ ದರವನ್ನು ಸ್ಟೇಜ್ಗಳ ಆಧಾರದ ಮೇಲೆ ಶೇ.37ರವರೆಗೂ ಕಡಿತಗೊಳಿಸಿತ್ತು. ಈ ಪರಿಷ್ಕೃತ ದರ ಪ್ರಾಯೋಗಿಕವಾಗಿ ಒಂದು ತಿಂಗಳು ಮಾತ್ರ ಜಾರಿಯಲ್ಲಿರುವುದಾಗಿ ತಿಳಿಸಿತ್ತು. ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದಲ್ಲಿ ಪರಿಷ್ಕೃತ ದರ ವಿಸ್ತರಿಸುವುದಾಗಿಯೂ ಹೇಳಿತ್ತು. ಅದರಂತೆ ಜನವರಿ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲದಿದ್ದರೂ ತಕ್ಕಮಟ್ಟಿಗೆ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪರಿಷ್ಕೃತ ದರವನ್ನು ಫೆಬ್ರವರಿ ತಿಂಗಳಿಗೂ ವಿಸ್ತರಿಸಲಾಗಿದೆ.
ನಗರದಲ್ಲಿ ಪ್ರತಿ ದಿನ ಸುಮಾರು 60ರಿಂದ 70 ಸಾವಿರ ಪ್ರಯಾಣಿಕರು ವೋಲ್ವೋ (ವಜ್ರ ಮತ್ತು ವಾಯು ವಜ್ರ) ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ಟಿಕೆಟ್ ದರ ಇಳಿಕೆ ಬಳಿಕ ಅಂದರೆ ಕಳೆದ ಒಂದು ತಿಂಗಳಲ್ಲಿ ದಿನಕ್ಕೆ ಸುಮಾರು ಆರು ಸಾವಿರಕ್ಕೂ ಹೆಚ್ಚಿನ ಪ್ರಯಾಣಿಕರು ವೋಲ್ವೋ ಬಸ್ಗಳಲ್ಲಿ ಪ್ರಯಾಣಿಸಿದ್ದಾರೆ.
ವೆಚ್ಚ ಜಾಸ್ತಿ, ಆದಾಯ ಕಡಿಮೆ: ಬಿಳಿ ಆನೆ ಎಂದೇ ಕರೆಯುವ ವೋಲ್ವೋ ಬಸ್ಗಳ ಕಾರ್ಯಾಚರಣೆಗೆ ಪ್ರತಿ ಕಿಲೋ ಮೀಟರ್ಗೆ 77 ರು. ವೆಚ್ಚವಾಗುತ್ತಿದೆ. ಆದಾಯ ಮಾತ್ರ ಪ್ರತಿ ಕಿಲೋ ಮೀಟರ್ಗೆ 45 ರು. ಬರುತ್ತಿದೆ. ಇದರಿಂದ ಬಿಎಂಟಿಸಿಗೆ ಪ್ರತಿ ಕಿ.ಮೀ.ಗೆ 32 ರು. ನಷ್ಟವಾಗುತ್ತಿದೆ. ಟಿಕೆಟ್ ದರ ಇಳಿಕೆ ಮಾಡಿದ್ದರಿಂದ ಶೇ.10ರಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಆದರೂ ನಿತ್ಯದ ಗಳಿಕೆಯಲ್ಲಿ 2 ಲಕ್ಷ ರು. ಆದಾಯ ಕುಸಿಯುತ್ತಿದೆ. ನಿತ್ಯ ಸುಮಾರು 680 ವೋಲ್ವೋ ಬಸ್ಗಳು ಕಾರ್ಯಾಚರಣೆಯಿಂದ ಟಿಕೆಟ್ ಆದಾಯ ಸುಮಾರು 27 ಲಕ್ಷ ರು. ಸಂಗ್ರಹ ವಾಗುತ್ತಿತ್ತು. ಜನವರಿ ತಿಂಗಳಲ್ಲಿ ಈ ಆದಾಯ 25 ಲಕ್ಷ ರು.ಗೆ ಕುಸಿದಿದೆ.
ಬಿಎಂಟಿಸಿ ನಿಗಮವು ಸ್ಟೇಜ್ಗಳ ಆಧಾರದ ಮೇಲೆ ಶೇ.37ರವರೆಗೂ ಟಿಕೆಟ್ ದರ ಕಡಿತಗೊಳಿಸಿರುವುದರಿಂದ ವಜ್ರ ಹಾಗೂ ವಾಯುವಜ್ರ ಬಸ್ಗಳ ಟಿಕೆಟ್ ದರದಲ್ಲಿ ಕನಿಷ್ಠ 15 ರು. ನಿಂದ ಗರಿಷ್ಠ 50 ರು.ವರೆಗೂ ಟಿಕೆಟ್ ದರ ಕಡಿಮೆಯಾಗಿದೆ. ಇದರಿಂದ ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ, ಐಟಿಪಿಎಲ್ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಉಳಿದ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಕೊಂಚವಷ್ಟೇ ಏರಿಕೆ ಕಂಡಿದೆ. ಇದೀಗ ಫೆಬ್ರವರಿ ಅಂತ್ಯದವರೆಗೂ ಪರಿಷ್ಕೃತ ದರ ಮುಂದುವರಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಏರಿಕೆಯಾಗಿ ನಷ್ಟ ಕಡಿಮೆಯಾಗುವ ನಿರೀಕ್ಷೆಯಿದೆ.
