ಬೆಂಗಳೂರು :  ಬೆಂಗಳೂರು: ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮಾಡಿರುವ ಲೈಂಗಿಕ ಕಿರುಕುಳ ಆರೋಪ ನ್ಯಾಯಾಲಯದ ಮೆಟ್ಟಿಲೇರಿರುವ ಸಮಯದಲ್ಲೇ ‘ವಿಸ್ಮಯ’ ಚಿತ್ರತಂಡದ ಸದಸ್ಯರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೇಳಿಕೆಗಳನ್ನು ಹರಿಬಿಟ್ಟಿದ್ದಾರೆ. 

‘ವಿಸ್ಮಯ’ ಚಿತ್ರದ ತಮಿಳು ಅವತರಣಿಕೆಯ ನಿರ್ಮಾಪಕ ಅರುಣಾಚಲಂ, ಛಾಯಾಗ್ರಾಹಕ ಅರವಿಂದ್ ಕೃಷ್ಣ, ನಿರ್ದೇಶಕ ಅರುಣ್ ವೈದ್ಯನಾಥನ್ ಹಾಗೂ ನಿರ್ಮಾಪಕ ಉಮೇಶ್ ಚಿತ್ರೀಕರಣದ ವೇಳೆ ಯಾವುದೇ ಅಹಿತಕರ ಘಟನೆಯಾಗಲೀ ಲೈಂಗಿಕ ಶೋಷಣೆಯಾಗಲೀ ನಡೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ನಾಲ್ವರ ಹೇಳಿಕೆಗಳು ಶ್ರುತಿ ಆರೋಪದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.

ಸರ್ಜಾಗೆ ರಿಲೀಫ್ :  ನಟಿ ಶ್ರುತಿಹರಿಹರನ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ಹಿರಿಯ ನಟ ಅರ್ಜುನ್ ಸರ್ಜಾ ಅವರಿಗೆ ತಾತ್ಕಾಲಿಕ ರಿಲೀಫ್ ದೊರೆತಿದೆ. 

ಮಹಿಳೆಯ ಗೌರವಕ್ಕೆ ಧಕ್ಕೆ ತಂದ, ಲೈಂಗಿಕ ಕಿರುಕುಳ ನೀಡಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ನಟ ಅರ್ಜುನ್ ಸರ್ಜಾ ಅವರನ್ನು ನ.14ರವರೆಗೆ ಬಂಧಿಸಬಾರದು ಎಂದು ಕಬ್ಬನ್ ಪಾರ್ಕ್ ಠಾಣಾ ಪೊಲೀಸರಿಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ನಿರ್ದೇಶನ ನೀಡಿದೆ. ಆದರೆ, ಕಾನೂನು ರೀತ್ಯ ಪ್ರಕರ ಣದ ತನಿಖೆ ಮುಂದುವರಿಸಬಹುದು ಎಂದು ತಿಳಿಸಿದೆ. 

ಶ್ರುತಿ ಹರಿಹರನ್ ನೀಡಿದ ದೂರು ಆಧರಿಸಿ ನಗರದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ನಟ ಅರ್ಜುನ್ ಸರ್ಜಾ ಸಲ್ಲಿಸಿದ್ದ ಅರ್ಜಿ ವಿಚಾರಣೆ  ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠದ ಮುಂದೆ ಶುಕ್ರವಾರ ನಡೆದು ಈ ವೇಳೆ ಕೋರ್ಟ್ ಈ ನಿರ್ದೇಶನ ನೀಡಿತು.

‘ಶ್ರುತಿ ಆರೋಪ ಚಿತ್ರೀಕರಣದ ಭಾಗ’: ಇದಕ್ಕೂ ಮೊದಲು ಅರ್ಜುನ್ ಪರ ವಾದ ಮಂಡಿಸಿದ ವಕೀಲ ಬಿ.ವಿ. ಆಚಾರ್ಯ, ಸುತ್ತಲೂ ೫೦ಕ್ಕೂ ಹೆಚ್ಚು ಜನ ಹಾಗೂ ನಿರ್ದೇಶಕನ ಉಪಸ್ಥಿತಿಯಲ್ಲಿ ಸಾರ್ವಜನಿಕವಾಗಿ ಚಿತ್ರೀಕರಣ ನಡೆದಿದೆಯೇ ಹೊರತು ಖಾಸಗಿಯಾಗಿ ಅಲ್ಲ. ಚಿತ್ರಕಥೆಯ ಅಗತ್ಯದಂತೆ ನಟರಾದ ಅರ್ಜುನ್ ಸರ್ಜಾ ಹಾಗೂ ಶ್ರುತಿ ಪತಿ-ಪತ್ನಿ ಹಾಗೂ ರೋಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಸರ್ಜಾ ಕೆನ್ನೆಗೆ ಚುಂಬಿಸಿರುವ ಶ್ರುತಿ, ಸರ್ಜಾ ತಬ್ಬಿಕೊಂಡಿರುವುದಕ್ಕೆ ಮಾತ್ರ ತಕರಾರು ತೆಗೆದು, ಮೂರು ವರ್ಷಗಳ ನಂತರ ಅತಿರಂಜಿತವಾಗಿ ಆರೋಪಿಸುತ್ತಿದ್ದಾರೆ ಎಂದರು. 

ಅರ್ಜಿದಾರರು ಕಳೆದ 37 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ನಾಲ್ಕು ಭಾಷೆಯಲ್ಲಿ 150ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗೌರವಯುತ ವ್ಯಕ್ತಿಯಾಗಿದ್ದು, ನಟನೆಯಿಂದಷ್ಟೇ ಅಲ್ಲದೆ, ಉತ್ತಮ ನಡತೆ ಹಾಗೂ ವ್ಯಕ್ತಿತ್ವದಿಂದ ಸಾಕಷ್ಟು ಗೌರವ ಸಂಪಾದಿಸಿದ್ದಾರೆ. ಅವರಿಗೂ ಇಬ್ಬರು ಹೆಣ್ಣುಮಕ್ಕಳಿದ್ದು, ದೊಡ್ಡ ಮಗಳಿಗೆ ಶ್ರುತಿ ಹರಿಹರನ್ ಅಷ್ಟೇ ವಯಸ್ಸು. ಲೈಂಗಿಕ ಕಿರುಕುಳ ಕುರಿತ ಮೀ ಟೂ ಆಂದೋಲನ ಹೆಸರಿನಲ್ಲಿ ಜನಪ್ರಿಯತೆ ಪಡೆಯಲು ನಟಿ ಶ್ರುತಿ ಹರಿಹರನ್ ಅ.20 ರಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುಳ್ಳು ಆರೋಪಗಳನ್ನು ಮಾಡಿ, ಸರ್ಜಾ ಗೌರವಕ್ಕೆ ಧಕ್ಕೆ ತಂದಿದ್ದಾರೆ. 

2015 ರಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದಲ್ಲಿ ಅರ್ಜುನ್ ತಮ್ಮನ್ನು ತಬ್ಬಿಕೊಂಡರು, ಬೆನ್ನನ್ನು ಸವರಿದರು ಹಾಗೂ ಪೃಷ್ಠವನ್ನು ಸ್ಪರ್ಶಿಸಿದರು. ನಾನು ಸಹ ಸಂತ್ರಸ್ತೆ ಎಂದು ಶ್ರುತಿ ಕರೆದುಕೊಂಡಿದ್ದಾರೆ. ಆದರೆ, ಈ ಆರೋಪಗಳೆಲ್ಲಾ ಚಿತ್ರೀಕರಣದ ಭಾಗವಾಗಿದ್ದವು ಎಂದು ತಿಳಿಸಿದರು.