ನವದೆಹಲಿ (ಆ. 21): ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ  ನಿಧನದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಏಮ್ಸ್ ಆಸ್ಪತ್ರೆಯ ಡಾಕ್ಟರ್‌ಗಳ ಜೊತೆಗೂಡಿ ನಗುತ್ತಿದ್ದರು ಎಂಬ ಒಕ್ಕಣೆಯೊಂದಿಗಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಆಮ್ ಆದ್ಮಿ ಜಿಂದಾಬಾದ್’ ಎಂಬ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋದೊಂದಿಗೆ ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಪ್ರಧಾನಿ  ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ’ ಎಂದು ವ್ಯಂಗ್ಯವಾಗಿ ಅಡಿಬರಹವನ್ನು ಬರೆದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಅದು 2,200 ಬಾರಿ ಶೇರ್ ಆಗಿದೆ.

ಆದರೆ ನಿಜಕ್ಕೂ ಮಾಜಿ ಪ್ರಧಾನಿ ವಾಜಪೇಯಿ ನಿಧನದ ಬಳಿಕ ನರೇಂದ್ರ ಮೋದಿ ದೆಹಲಿಯ ಏಮ್ಸ್ ಆಸ್ಪತ್ರೆಯ ಡಾಕ್ಟರ್‌ಗಳ ಜೊತೆಗೂಡಿ ನಗುತ್ತಿದ್ದುದು ನಿಜವೇ ಎಂದು ಪರಿಶೀಲಿಸಿದಾಗ ಅದು ಹಳೆಯ ಫೋಟೋ ಎಂಬುದು ಪತ್ತೆಯಾಗಿದೆ. ವಾಜಪೇಯಿ ನಿಧನರಾದ ದಿನ ಮೋದಿ ಆಸ್ಪತ್ರೆಗೆ ತೆರಳಿದ್ದಾಗ ಬಿಳಿ ಬಣ್ಣದ ಪೂರ್ಣ ಕೈತೋಳಿನ ಕುರ್ತಾ ಧರಿಸಿದ್ದರು.

2016 ರ ಫೋಟೋವನ್ನು ಬಳಸಿಕೊಂಡು ವಾಜಪೇಯಿ ನಿಧನರಾದ ಬಳಿಕ ಮೋದಿ ವೈದ್ಯರ ಜೊತೆಗೂಡಿ ನಗುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿದೆ. ಅಲ್ಲದೆ ನರೇಂದ್ರ ಮೋದಿ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ್ದು ಆಗಸ್ಟ್ 16 ರ ಮಧ್ಯಾಹ್ನ 2;45 ಕ್ಕೆ, ಆದರೆ ವಾಜಪೇಯಿ ನಿಧನರಾಗಿದ್ದು ಸಂಜೆ 5.5 ಕ್ಕೆ. ಹಾಗಾಗಿ ವಾಜಪೇಯಿ ನಿಧನರಾದ ಬಳಿಕ ಮೋದಿ ನಗುತ್ತಿದ್ದರು ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನರಾದ ಬಳಿಕ ನರೇಂದ್ರ ಮೋದಿ ನಗುತ್ತಿದ್ದರು ಎಂಬ ಒಕ್ಕಣೆಯೊಂದಿಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು. 

-ವೈರಲ್ ಚೆಕ್