ಬೆಂಗಳೂರು :  ಜ್ವರ, ಮೈ-ಕೈ ನೋವು, ಶೀತ. ಇನ್ನಿತರ ಸಣ್ಣಪುಟ್ಟ ಕಾಯಿಲೆಗಳಿಗೆ ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುತ್ತೇವೆ. ಆದರೆ, ಸುರಕ್ಷಿತ ಮಾತ್ರೆ  ಎಂದೇ ಹೇಳಲಾಗುವ ಪ್ಯಾರಸಿಟಮಾಲ್‌ಗಳು ಮಾರಕ ವೈರಸ್‌ನಿಂದ ಕೂಡಿವೆ. ಅವುಗಳ ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ಹೀಗಾಗಿ ಪ್ಯಾರಸಿಟಮಾಲ್ ಮಾತ್ರೆಗಳನ್ನು ಸೇವಿಸಬೇಡಿ ಎಂಬ ಸಂದೇಶವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. 

ಪಿ/500 ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚರ ವಹಿಸಿ. ಬಿಳಿಯ ಬಣ್ಣದ ಈ ಮಾತ್ರೆಯಲ್ಲಿ ಅತ್ಯಂತ ಅಪಾಯಕಾರಿಯಾದ ಮಾಚುಪೋ ಅಥವಾ ಬ್ಲ್ಯಾಕ್ ಟೈಪಸ್ ಎಂಬ ವೈರಸ್ ಇರುವುದು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾಗಿದೆ. ಇದರ ಸೇವನೆಯಿಂದ ಸಾವು ಸಂಭವಿಸಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂದೇಶದಲ್ಲಿ ಬರೆಯಲಾಗಿದೆ. ಭಾರತ ಮಾತ್ರವಲ್ಲ ಇಂಡೋನೇಷ್ಯಾದಲ್ಲೂ ಇದೇ ರೀತಿ ವದಂತಿ ಹಬ್ಬಿತ್ತು. 

ಈ ಹಿನ್ನೆಲೆಯಲ್ಲಿ ಜನರ ಆತಂಕವನ್ನು ನಿವಾರಿಸುವ ನಿಟ್ಟಿನಿಂದ ಇಂಡೋನೋಷ್ಯಾದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಪ್ಯಾರಸಿಟಮಾಲ್ ಮಾತ್ರೆಯನ್ನು ಪ್ರಯೋಗಾಲ ಯದಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಅದೊಂದು ಸುಳ್ಳುಸುದ್ದಿ ಎಂದು ತಿಳಿಸಿದೆ. ಪ್ಯಾರಸಿಟಮಾಲ್ ಜಗತ್ತಿನೆಲ್ಲೆಡೆ ಬಳಕೆಯಾಗುವ ಸಾಮಾನ್ಯ ಔಷಧ. 

ಈ ಮಾತ್ರೆ ಯನ್ನು ಅತ್ಯಂತ ಸುರಕ್ಷಿತ ಎಂದೇ ಭಾವಿಸಲಾಗಿದೆ. ಯಾವುದೇ ಮಾತ್ರೆ ಮಾರುಕಟ್ಟೆಗೆ ಬಿಡುಗಡೆ ಆಗುವುದಕ್ಕೂ ಮುನ್ನ ಸರ್ಕಾರದಿಂದ ಅಧಿಕೃತ ಪರವಾನಗಿ ಪಡೆದಿರಬೇಕು. ಜೊತೆಗೆ ಎರಡು ಬಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು. ಅದಾದ ಬಳಿಕವೇ ಮಾರುಕಟ್ಟೆಗೆ ಬಿಡುಗಡೆ ಆಗುತ್ತದೆ. ಹೀಗಾಗಿ ಪ್ಯಾರಸಿಟಮಾಲ್ ಮಾತ್ರೆಯಲ್ಲಿ ಘಾತಕ ವೈರಸ್ ಇದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ.