2019 ರ ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿ ಇರುವಾಗ ಬಿಜೆಪಿ ತನಗೇ ಜಯ ಎಂದು ಲಡ್ಡು ಹಂಚಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬಂತಹ, ಟನ್‌ಗಟ್ಟಲೆ ಲಡ್ಡುಗಳನ್ನು ತಯಾ
ರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಫೋಟೋ ಪೋಸ್ಟ್ ಮಾಡಿ, ‘ಲಡ್ಡುಗಳ ರಾಶಿ ನೋಡಿ, ಮತ್ತು ಮೋದಿ ಅವರು ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆಂದು ಕಲ್ಪಿಸಿಕೊಳ್ಳಿ. ಜೈ ಶ್ರೀ ರಾಮ್’ ಎಂದು ಒಕ್ಕಣೆ ಬರೆಯಲಾಗಿದೆ. ಸದ್ಯ  ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಬೂಮ್ ಲೈವ್ ಸುದ್ದಿ ಸಂಸ್ಥೆ ರಿವರ್ಸ್ ಇಮೇಜ್ ನಲ್ಲಿ ಪರಿಶೀಲಿಸಿದಾಗ, ಈ ಮುಂಚೆಯೂ ಇದೇ ಫೋಟೋ ವೈರಲ್ ಆಗಿತ್ತು ಎಂದು ತಿಳಿದುಬಂದಿದೆ. ಇದೇ ವರ್ಷ ಜನವರಿಯಲ್ಲಿ ಇದೇ ಫೋಟೋವನ್ನು ಬಳಸಿ ‘ಹರ‌್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿಯೇ ಜಯಗಳಿಸುತ್ತದೆ. ಹಾಗಾಗಿ ಲಡ್ಡು ಹಂಚಲು ಟನ್‌ಗಟ್ಟಲೆ ಲಡ್ಡನ್ನು ತಯಾರಿಸಲಾಗುತ್ತಿದೆ’ ಎಂದು ಹೇಳಲಾಗಿತ್ತು.

ಇದೇ ವೇಳೆ 2018 ಆಗಸ್ಟ್‌ನಲ್ಲಿ ಬೇರೆಯದೇ ಒಕ್ಕಣೆ ನೀಡಿ ಇದೇ ಫೋಟೋಗಳನ್ನು ಟ್ವೀಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಹರಿದಾಡಿತ್ತು ಎಂದು ತಿಳಿದುಬಂದಿದೆ.

ಅದರಲ್ಲಿ ಈ ಲಡ್ಡುಗಳನ್ನು ರೋಹ್ಟಕ್‌ನಲ್ಲಿ ಮಹಾ ಕಬೀರ್ ಭಂದರಾಕ್ಕಾಗಿ ತಯಾರಿಸಲಾಗುತ್ತಿದೆ ಎಂದು ಹೇಳಲಾಗಿದೆ. 2018 ಕ್ಕಿಂತ ಮೊದಲೇ ಈ ಫೋಟೋ ಹರಿದಾಡುತ್ತಿರುವುದರಿಂದ ಸದ್ಯ ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ ಬಿಜೆಪಿ ಸಿದ್ಧತೆ ನಡೆಸಿ ,ಸಿಹಿ ಹಂಚಲು ಲಡ್ಡು ತಯಾರಿಸುತಿದೆ ಎಂಬ ಸುದ್ದಿ ಸುಳ್ಳು ಎಂಬುದು ಸ್ಪಷ್ಟ. 

- ವೈರಲ್ ಚೆಕ್