ಇದೀಗ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಹೇಳಿಕೆಯಲ್ಲಿ ಒಂದು ವೇಳೆ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗದಿದ್ದರೆ, ಕಾಂಗ್ರೆಸ್‌ ಭಾರತವನ್ನು ನಿರ್ನಾಮ ಮಾಡಲಿದೆ ಎಂದು ಪ್ರಣಬ್‌ ಮುಖರ್ಜಿಯವರು ಹೇಳಿದ್ದಾರೆನ್ನಲಾಗಿದೆ. 

ನವದೆಹಲಿ : ಕಳೆದ ಕೆಲ ತಿಂಗಳಿನಿಂದ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಕುರಿತಾದ ಸುಳ್ಳು ಸುದ್ದಿಗಳು ಸಾಕಷ್ಟುಸಂಖ್ಯೆಯಲ್ಲಿ ಹರಿದಾಡುತ್ತಿವೆ. ಇದೀಗ ಪ್ರಣಬ್‌ ಮುಖರ್ಜಿ ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆ ಹೇಳಿಕೆಯಲ್ಲಿ ಒಂದು ವೇಳೆ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗದಿದ್ದರೆ, ಕಾಂಗ್ರೆಸ್‌ ಭಾರತವನ್ನು ನಿರ್ನಾಮ ಮಾಡಲಿದೆ ಎಂದು ಪ್ರಣಬ್‌ ಮುಖರ್ಜಿಯವರು ಹೇಳಿದ್ದಾರೆನ್ನಲಾಗಿದೆ.

ಬಾರ್‌ ಬಾರ್‌ ಮೋದಿ ಸರ್ಕಾರ ಎಂಬ ಫೇಸ್‌ಬುಕ್‌ ಪೇಜ್‌ ಈ ಹೇಳಿಕೆಯೊಂದಿಗೆ ನೀವು ಪ್ರಣಬ್‌ ಮುಖರ್ಜಿ ಹೇಳಿಕೆಯನ್ನು ಒಪ್ಪುತ್ತೀರಾ? ಎಂದು ಅಡಿಬರಹ ಬರೆದು ಮೊದಲಿಗೆ ಶೇರ್‌ ಮಾಡಿದೆ. ಈ ಹೇಳಿಕೆಯನ್ನು ಜೂನ್‌ 2ರಂದು ಪೋಸ್ಟ್‌ ಮಾಡಿದಾಗಿನಿಂದ 2500 ಬಾರಿ ಶೇರ್‌ ಮಾಡಲಾಗಿದೆ. ಸದ್ಯ ಈ ಹೇಳಿಕೆ ವೈರಲ್‌ ಆಗಿದೆ.

ಆದರೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ನಿಜಕ್ಕೂ ಈ ರೀತಿ ಹೇಳಿಕೆ ನೀಡಿದ್ದರೇ ಎಂದು ಆಲ್ಟ್‌ ನ್ಯೂಸ್‌ ತನಿಖೆಗೆ ಮುಂದಾದಾಗ ಈ ಹೇಳಿಕೆ ಪ್ರಣಬ್‌ ಮುಖರ್ಜಿ ಹೇಳಿರುವುದು ಸುಳ್ಳು ಎಂಬುದು ಸಾಬೀತಾಗಿದೆ. ಆಲ್ಟ್‌ ನ್ಯೂಸ್‌ ಮಾಜಿ ರಾಷ್ಟ್ರಪತಿ ಕಚೇರಿಯಲ್ಲಿಯೇ ಈ ಕುರಿತು ಸ್ಪಷ್ಟೀಕರಣ ಕೇಳಿದ್ದು, ಅದು ಪ್ರಣಬ್‌ ಮುಖರ್ಜಿಯವರು ಹೇಳಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಹೇಳಿಕೆ ಸಂಪೂರ್ಣ ಸುಳ್ಳು ಮತ್ತು ಆಧಾರ ರಹಿತವಾದುದು. ಮಾಜಿ ರಾಷ್ಟ್ರಪತಿಗಳು ಆ ರೀತಿಯ ಯಾವುದೇ ಹೇಳಿಕೆಯನ್ನೂ ನೀಡಿಲ್ಲ ಎಂದು ಹೇಳಿದ್ದಾರೆ.

ಪ್ರಣಬ್‌ ಮುಖರ್ಜಿ ಕುರಿತ ಸುಳ್ಳು ಸುದ್ದಿಗಳು ಇದೇ ಹೊಸತೇನಲ್ಲ. ಕೆಲವು ದಿನಗಳ ಹಿಂದಷ್ಟೇ ಮುಖರ್ಜಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖರ್ಜಿ ಆರ್‌ಎಸ್‌ಎಸ್‌ನ ಇತರ ನಾಯಕರಂತೆ ಸಲ್ಯೂಟ್‌ ಮಾಡುತ್ತಿರುವಂತೆ ಫೋಟೋಶಾಪ್‌ ಮೂಲಕ ಚಿತ್ರವನ್ನು ಮಾರ್ಪಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸಲಾಗಿತ್ತು. 

(ವೈರಲ್ ಚೆಕ್)