ಪ್ರಧಾನಿ ನರೇಂದ್ರ ಮೋದಿ ಅವರು ಇಸ್ಲಾಂ ಧರ್ಮದ ಧ್ವಜವನ್ನು ತೋರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ. 

‘ಭಾಷಣ್‌ ಯಾ ರಾಷನ್‌’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಜ.29ರಂದು ಪ್ರಕಟಿಸಿದ ಪೊಸ್ಟ್‌ಗೆ 8,500 ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ 1,200 ಮಂದಿ ಈ ಪೋಸ್ಟ್‌ ಅನ್ನು ಷೇರ್‌ ಮಾಡಿದ್ದಾರೆ. ಈ ಚಿತ್ರದಲ್ಲಿ ಇಸ್ಲಾಂ ಧ್ವಜವನ್ನು ಪ್ರತಿನಿಧಿಸುವ ಅರ್ಧ ಚಂದ್ರ ಹಾಗೂ ನಕ್ಷತ್ರವನ್ನು ಕಾಣಬಹುದಾಗಿದೆ. ಹೀಗಾಗಿ ಮೋದಿ ಅವರು ಹಿಡಿದುಕೊಂಡಿರುವುದು ಇಸ್ಲಾಂ ಧ್ವಜ ಎಂದು ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಮೋದಿ ಅವರು ವಾಸ್ತವವನ್ನೇ ತೋರಿಸಿದ್ದಾರೆ. ಮೋದಿ ಅವರ ಅಭಿಮಾನಿಗಳಿಗೆ ನಾಚಿಕೆಯಾಗಬೇಕು ಎಂಬ ಕಮೆಂಟ್‌ಗಳು ವ್ಯಕ್ತವಾಗಿವೆ. 

ಆದರೆ, ಇಂಡಿಯಾ ಟುಡೇ ನಡೆಸಿದ ಸತ್ಯಾವೇಷಣೆಯಲ್ಲಿ ಈ ಫೋಟೋ ನಕಲಿ ಎಂಬುದು ತಿಳಿದುಬಂದಿದೆ. ಮೋದಿ ಅವರು ಅಸ್ಸಾಂನಲ್ಲಿ ಕಳೆದ ವರ್ಷ ಡಿ.25ರಂದು ದೇಶದ ಅತಿ ಉದ್ದದ ರೈಲು-ರಸ್ತೆ ಸೇತುವೆಯಾದ ಬೋಗಿ ಬೀಲ್‌ ಬ್ರಿಡ್ಜ್‌ ಉದ್ಘಾಟನೆಯ ವೇಳೆ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಆದರೆ, ಹಸಿರು ಬಾವುಟದ ಮೇಲೆ ಫೋಟೋ ಶಾಪ್‌ ಮೂಲಕ ಅದು ಇಸ್ಲಾಂ ಧರ್ಮದ ಧ್ವಜದಂತೆ ಕಾಣುವಂತೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ.