ಬೆಂಗಳೂರು (ಮಾ. 26): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಜನರ ಗುಂಪೊಂದಕ್ಕೆ ರಾಜಾರೋಷವಾಗಿ ಹಣ ಹಂಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಐ ಸಪೋರ್ಟ್‌ ರವೀಶ್‌ ಕುಮಾರ್‌’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಈ ವಿಡಿಯೋ ಶೇರ್‌ ಮಾಡಿ, ‘ಚುನಾವಣಾಧಿಕಾರಿ ಎಲ್ಲಿ?’ ಎಂದು ಬರೆದುಕೊಂಡಿದೆ. ವಿಡಿಯೋದಲ್ಲಿ ಆದಿತ್ಯನಾಥ್‌ ಸಮ್ಮುಖದಲ್ಲಿ ಮುಖಂಡರೊಬ್ಬರು ದುಡ್ಡು ಹಂಚುತ್ತಿರುವ ದೃಶ್ಯವಿದೆ. ಆದರೆ ಈ ವಿಡಿಯೋದ ಅಸಲಿಯತ್ತನ್ನು ಕ್ವಿಂಟ್‌ ಸುದ್ದಿ ಸಂಸ್ಥೆ ಬಯಲಿಗೆಳೆದಿದೆ.

 

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದು ಹಳೆಯ ವಿಡಿಯೋ ಎಂದು ತಿಳಿದುಬಂದಿದೆ. ಯುಟ್ಯೂಬ್‌ನಲ್ಲಿ ಮೂಲ ವಿಡಿಯೋ ಇದ್ದು, ಇದನ್ನು ಅಪ್‌ಲೋಡ್‌ ಮಾಡಿದವರನ್ನು ಸಂಪರ್ಕಿಸಿದಾಗ ಸತ್ಯ ಬಯಲಾಗಿದೆ. ವಾಸ್ತವವಾಗಿ 2012 ಏಪ್ರಿಲ್‌ನಲ್ಲಿ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಹಲವು ಜಮೀನುಗಳು ಸುಟ್ಟು ಹೋಗಿದ್ದವು. ಈ ವೇಳೆ ಇಲ್ಲಿನ ಸಂಸದರಾಗಿದ್ದ ಯೋಗಿ, ಸ್ಥಳಕ್ಕೆ ಭೇಟಿ ನೀಡಿ ಬೆಳೆ ಕಳೆದುಕೊಂಡ ರೈತರಿಗೆ ತಾವಾಗಿಯೇ ಖುದ್ದು ಧನಸಹಾಯ ಮಾಡಿದ್ದರು. ಬೆಳೆ ಹಾನಿ ಆಧಾರದ ಮೇಲೆ 1000, 2000 ರು. ಹಂಚಿದ್ದರು. ಆ ವಿಡಿಯೋವನ್ನು ಸದ್ಯ ಚುನಾವಣೆ ಎದುರಾಗಿರುವುದರಿಂದ ಮತದಾರರಿಗೆ ಹಣ ಹಂಚುತ್ತಿದ್ದಾರೆಂದು ಸುಖ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್