ರಾಹುಲ್ ಗಾಂಧಿ ಅಮೇಠಿಯಲ್ಲಿ ಸ್ಮತಿ ಇರಾನಿ ಎದುರು ಪರಾಭವಗೊಂಡ ಬಳಿಕ ನೊಂದ ಅಲ್ಲಿನ ಜನ ದೆಹಲಿಗೆ ಬಂದು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ ಎಂಬ ಸಂದೇಶವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ.

20 ಸೆಕೆಂಡ್‌ಗಳಿರುವ ವಿಡಿಯೋದಲ್ಲಿ ನೊಂದ ಮಹಿಳೆಯರು ರಾಹುಲ್ ಗಾಂಧಿಯವರನ್ನು ಸುತ್ತುವರೆದು ಕಣ್ಣೀರು ಸುರಿಸುತ್ತಿರುವ ದೃಶ್ಯವಿದೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ಅಮೇಠಿ ಜನರು ದೆಹಲಿಗೆ ಬಂದು ರಾಹುಲ್‌ರನ್ನು ಭೇಟಿ ಮಾಡಿದ್ದರೇ ಎಂದು ಪರಿಶೀಲಿಸಿ ದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ.

ಬೂಮ್ ಲೈವ್ ಸುದ್ದಿ ಸಂಸ್ಥೆ ರಿವರ್ಸ್ ಇಮೇಜ್ ಮೂಲಕ ಈ ವಿಡಿಯೋ ಸತ್ಯಾಸತ್ಯ ಪರಿಶೀಲಿಸಿದಾಗ, 2017 ರ ವಿಡಿಯೋವೊಂದು ಪತ್ತೆಯಾಗಿದೆ. ಇದೇ ವಿಡಿಯೋವನ್ನು ಕಾಂಗ್ರೆಸ್‌ನ ಅಧಿಕೃತ ಟ್ವೀಟರ್  ಖಾತೆಯೂ ಶೇರ್ ಮಾಡಿದೆ. ಅದರಲ್ಲಿ ‘ರಾಹುಲ್ ಗಾಂಧಿ ಎನ್‌ಟಿಪಿಸಿ ಮುಖ್ಯ ಕಚೇರಿ ಮತ್ತು ನೊಂದ ಕುಟುಂಬಗಳಿಗೆ ಭೇಟಿ ನೀಡಿದರು’ ಎಂದು ಹೇಳಲಾಗಿದೆ.

ನವೆಂಬರ್ 1, 2017 ರಂದು ರಾಯ್‌ಬರೇಲಿಯ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೋರೇಶನ್‌ನ ಬಾಯ್ಲರ್ ಯೂನಿಟ್ ಸ್ಫೋಟಗೊಂಡು 26 ಜನರು ಮೃತಪಟ್ಟಿದ್ದರು. ಸುಮಾರು 200 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೃತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಆ ವಿಡಿಯೋವನ್ನು ಸದ್ಯ ಚುನಾವಣೆಗೆ ಲಿಂಕ್ ಮಾಡಿ ಸುಳ್ಳುಸುದ್ದಿ
ಹರಡಲಾಗುತ್ತಿದೆ. 

- ವೈರಲ್ ಚೆಕ್