ನವದೆಹಲಿ]ಮಾ.20]: ನೆಸ್ಲೇ ಇನ್‌ಸ್ಟಂಟ್‌ ಬ್ರ್ಯಾಂಡ್‌ ಮ್ಯಾಗಿಯಲ್ಲಿ ಹಂದಿ ಕೊಬ್ಬಿನ ಅಂಶ ಇರುತ್ತದೆ. ಸೀಕ್ರೆಟ್‌ ಇಂಡಿಯನ್‌ ಟೀವಿ ಈ ಸತ್ಯಾಂಶವನ್ನು ಬಯಲಿಗೆಳೆದಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋ 6.3 ಲಕ್ಷ ಬಾರಿ ವೀಕ್ಷಣೆಯಾಗಿದ್ದು, ಫೇಸ್‌ಬುಕ್‌ನ 9000 ಸಾವಿರ ಅಕೌಂಟ್‌ಗಳು ಶೇರ್‌ ಮಾಡಿವೆ. ‘ನೀವು ಮ್ಯಾಗಿ ತಿನ್ನುವವರಾಗಿದ್ದರೆ ಈ ವಿಡಿಯೋ ಶೇರ್‌ ಮಾಡಿ’ ಎಂದು ಬರೆದು ಶೇರ್‌ ಮಾಡಲಾಗುತ್ತಿದೆ.

ಹಂದಿ ಕೊಬ್ಬಿನ ಅಂಶ ಹೇಗೆ ಮ್ಯಾಗಿಯಲ್ಲಿ ಸೇರಿದೆ ಎಂಬುದನ್ನೂ ವಿಡಿಯೋದಲ್ಲಿ ತೋರಿಸಲಾಗುತ್ತದೆ.

ಆದರೆ ನಿಜಕ್ಕೂ ಮ್ಯಾಗಿಯಲ್ಲಿ ಹಂದಿ ಕೊಬ್ಬಿನ ಅಂಶ ಇದೆಯೇ ಎಂದು ಇಂಡಿಯಾ ಟುಡೇ ಪರಿಶೀಲಿಸಿದಾಗ ಇದು ಸುಳ್ಳೆಂದು ತಿಳಿದುಬಂದಿದೆ. ಮ್ಯಾಗಿಯಲ್ಲಿ ಇ-635 ಎಂಬ ಅಂಶವನ್ನು ಬಳಸಲಾಗುತ್ತದೆ.

ಅದು ಸಂಪೂರ್ಣವಾಗಿ ಸಸ್ಯದಿಂದಲೇ ಉತ್ಪತ್ತಿ ಮಾಡಲಾಗುವ ಅಂಶ. ಅಂದರೆ ಬೀಟ್‌ರೂಟ್‌ ಮತ್ತಿತರ ಅಂಶಗಳನ್ನು ಸೇರಿಸಿ ತಯಾರಿಸಲಾಗುತ್ತದೆ.