ಕಾಂಗ್ರೆಸ್‌ ಪ್ರಚಾರಕ್ಕಾಗಿ ಬಳಸಿದ ವ್ಯಾನ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಾಂಗ್ರೆಸ್‌ ಪ್ರಾಚಾರದ ವ್ಯಾನ್‌ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ, ‘ಕಾಂಗ್ರೆಸ್‌ ಶವ ಹೊತ್ತೊಯ್ಯುವ ವ್ಯಾನ್‌ ಅನ್ನು ರಾಜಕೀಯ ಪ್ರಚಾರಕ್ಕಾಗಿ ಬಳಕೆ ಮಾಡಿಕೊಂಡಿದೆ’ ಎಂದು ಹೇಳಲಾಗಿದೆ. 18 ಲಕ್ಷ ಜನ ಫಾಲೋಯರ್‌ಗಳಿರುವ ‘ದಿ ಇಂಡಿಯನ್‌ ಐ’ ಎಂಬ ಫೇಸ್‌ಬುಕ್‌ ಪೇಜ್‌ ಮೊದಲಿಗೆ ಈ ಪೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ. ಇದು 2,600 ಬಾರಿ ಶೇರ್‌ ಆಗಿದೆ. ಪೋಸ್ಟ್‌ ಮಾಡಿರುವ ವಾಹನದ ಮೇಲೆ ‘ಶವ ವಾಹನ’ ಎಂದು ಬರೆಯಲಾಗಿದೆ. ಜೊತೆಗೆ ಆ ಪೋಸ್ಟ್‌ನೊಂದಿಗೆ, ‘ದೇಶವನ್ನೇ ಲೂಟಿ ಮಾಡಿರುವ ಕಾಂಗ್ರೆಸ್‌ ಪಕ್ಷದ ಖಜಾನೆ ಸದ್ಯ ಖಾಲಿಯಾಗಿದೆ. ಹಾಗಾಗಿ ಶವಗಳನ್ನು ಹೊತ್ತುಯ್ಯುವ ವ್ಯಾನನ್ನು ಪ್ರಚಾರಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ. ಈ ಸಂದೇಶ ವಾಟ್ಸ್‌ಆ್ಯಪ್‌ ಫೇಸ್‌ಬುಕ್‌, ಟ್ವೀಟರ್‌ಗಳಲ್ಲಿ ವೈರಲ್‌ ಆಗಿದೆ.

ಆದರೆ ನಿಜಕ್ಕೂ ಕಾಂಗ್ರೆಸ್‌ ಹಣವಿಲ್ಲದೆ ಶವ ಹೊತ್ತೊಯ್ಯುವ ವ್ಯಾನ್‌ಅನ್ನು ಪ್ರಚಾರಕ್ಕೆ ಬಳಸಿಕೊಂಡಿತ್ತೇ ಎಂದು ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳುಸುದ್ದಿ, ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ಈ ರೀತಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ ಎಂಬುದು ಪತ್ತೆಯಾಗಿದೆ. ‘ಆಲ್ಟ್‌ ನ್ಯೂಸ್‌’ ಸುದ್ದಿ ಸಂಸ್ಥೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಹೊರಟಾಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಚಿತ್ರ ಫೋಟೋಶಾಪ್‌ ಮೂಲಕ ಎಡಿಟ್‌ ಆಗಿರುವ ಚಿತ್ರ ಎಂಬುದು ಪತ್ತೆಯಾಗಿದೆ. ವಾಸ್ತವವಾಗಿ ವಾಹನದ ಮೇಲೆ ‘ಶವ ವಾಹನ’ ಎಂದು ಹಿಂದಿಯಲ್ಲಿ ಬರೆದಿಲ್ಲ, ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ ‘ಶವ ವಾಹನ’ ಎಂದು ವಾಹನದ ಮೇಲೆ ಬರೆಯಲಾಗಿದೆ.