ಬೆಳಗಾವಿ[ಸೆ.30]: ಅಥಣಿ ಶಾಸಕ ಮಹೇಶ್‌ ಕುಮಟಳ್ಳಿ ಕುರಿತು ಆಡಿಯೋ ಬಹಳ ಹಳೆಯದು. ಅದನ್ನು ಈಗ ವೈರಲ್‌ ಮಾಡಿದ್ದಾರೆ. ನಮ್ಮ ಪರವಾಗಿ ಸತೀಶ್‌ ಜಾರಕಿಹೊಳಿ ಅವರು ಬ್ಯಾಟಿಂಗ್‌ ಮಾಡಿದ್ರೂ ಅವರಿಗೆ ಸ್ವಾಗತ. ವಿರೋಧ ಮಾಡಿದವರಿಗೂ ಸ್ವಾಗತ ಮಾಡುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಡಿಸಿಎಂ ಲಕ್ಷ್ಮಣ್‌ ಸವದಿ ಹೇಳಿದರು.

ಭಾನುವಾರ ನಗರದಲ್ಲಿ ಮಾತನಾಡಿದ ಅವರು, ನೆರೆ ಪರಿಹಾರಕ್ಕೆ ಕೊಡಲು ಹಣದ ಕೊರತೆ ನಮ್ಮ ಸರ್ಕಾರಕ್ಕೆ ಇಲ್ಲ. ಈಗಾಗಲೇ ಬೆಳಗಾವಿ ಜಿಲ್ಲೆಗೆ .500 ಕೋಟಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರ ಆ ನಂತರ ಹಣ ಕಳುಹಿಸಿಕೊಡುತ್ತೆ. ಸದ್ಯ ನಮ್ಮಲ್ಲಿ ಇರುವ ಹಣದಲ್ಲಿ ಕೆಲಸ ಆರಂಭಿಸಿದ್ದೇವೆ ಎಂದರು.

ಒಂದೇ ವಿಮಾನದಲ್ಲಿ ಪ್ರಯಾಣ:

ಡಿಸಿಎಂ ಲಕ್ಷ್ಮಣ ಸವದಿ, ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಹಾಗೂ ಜಾರಕಿಹೊಳಿ ಅಳಿಯ ಅಂಬಿರಾವ್‌ ಅವರು ಒಂದೇ ವಿಮಾನದಲ್ಲಿ ಭಾನುವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಲು ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ನಿರಾಕರಿಸಿದರು. ಅಳಿಯ ಅಂಬಿರಾವ್‌ ಪಾಟೀಲ್‌ ಕೂಡ ಜೊತೆಗೆ ಪ್ರಯಾಣಿಸಿರುವುದು ಗಮನ ಸೆಳೆಯಿತು.