ನವದೆಹಲಿ[ಜೂ.17]: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕ ಮೋಹನ್  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. 'ರಾಜ್ಯ ಸರ್ಕಾರ ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ರಾಜಕೀಯ ನಾಯಕರು ಹಿಂಸಾಚಾರ ತಡೆಯುವಲ್ಲಿ ವಿಫಲರಾಗುತ್ತಾರೆ ಎಂದಾದರೆ, ಅಂತಹವರು ನಾಯಕರೆಂದು ಕರೆಸಿಕೊಳ್ಳಲು ಯೋಗ್ಯರಲ್ಲ' ಎನ್ನುವ ಮೂಲಕ ದೀದಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ

ಭಾನುವಾರದಂದು RSSನ ಸುಮಾರು 800ಕ್ಕೂ ಅಧಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್ 'ಇಂದು ಪಶ್ಚಿಮ ಬಂಗಾಳದಲ್ಲಿ ಏನಾಗುತ್ತಿದೆ? ಚುನಾವಣೆ ಬಳಿಕ ಎಲ್ಲಾದರೂ ಇಂತಹ ಘಟನೆ ನಡೆದಿದ್ದು ಇದೆಯೇ? ಹೀಗಾಗಬಾರದು. ಗೂಂಡಾಗಳು ಹಿಂಸಾಚಾರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ, ಅಂತಹವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.

ಇಷ್ಟೇ ಅಲ್ಲದೇ 'ಕೆಲವರು ಕಾನೂನು ಮುರಿಯುತ್ತಾರೆ. ಹೀಗಿರುವಾಗ ಶಿಕ್ಷೆ ವಿಧಿಸಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯ. ಕಳೆದ 5 ವರ್ಷಗಳಲ್ಲಿ ದೇಶವನ್ನು ಒಡೆಯಲು ಹಲವಾರು ಮಂದಿ ಯತ್ನಿಸಿದ್ದಾರೆ. ಆದರೆ ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಇಂತಹ ತತ್ವಗಳುಳ್ಳವರನ್ನು ತಳ್ಳಿ ಹಾಕಿದ್ದಾರೆ' ಎಂದಿದ್ದಾರೆ.

ತಮ್ಮ ಭಾಷಣದಲ್ಲಿ ಮೋಹನ್ ಭಾಗವತ್, ಮಮತಾ ಬ್ಯಾನರ್ಜಿ ಹೆಸರೆತ್ತದೆ ವಾಗ್ದಾಳಿ ನಡೆಸಿದ್ದಾರೆ ಎಂಬುವುದು ಉಲ್ಲೇಖನೀಯ