ಚನ್ನರಾಯಪಟ್ಟಣ[ಮಾ.25]: ಕೆರೆಗಳಿಗೆ ನೀರು ತುಂಬಿಸದಿದ್ದರೇ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟಿಸುತ್ತಿರುವವರ ಸಮಾಧಾನ ಪಡಿಸಲು ಹೋದ ಶಾಸಕ ಸಿ.ಎನ್‌.ಬಾಲಕೃಷ್ಣ ಅವರನ್ನು ಏರು ಬಿಸಿಲಿನಲ್ಲಿಯೇ ಗ್ರಾಮಸ್ಥರು 2 ಕಿ.ಮೀ. ನಡೆಸಿ ಬೆವರಿಸಿದ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಭಾನುವಾರ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ದಿಡಗ ಮತ್ತು ಕಬ್ಬಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಜನರು, ಕೆರೆಗಳಿಗೆ ನೀರು ತುಂಬಿಸಬೇಕು. ಇಲ್ಲದಿದ್ದರೆ ಈ ಬಾರಿಯ ಲೋಕಸಭಾ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಆಗಮಿಸಿದ್ದರು. ಆಗ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಕೆರೆ ನೋಡಿ ಎಂದು ಹೇಳಿದ್ದಾರೆ. ಹೀಗಾಗಿ ಶಾಸಕರು ಬಿಸಿಲಿನಲ್ಲೇ ಗ್ರಾಮಸ್ಥರೊಂದಿಗೆ 2 ಕಿ.ಮೀ ನಡೆದಿದ್ದಾರೆ. ನಂತರ ಕೆರೆಯ ಬಳಿ ಕೂತು ಮಾತುಕತೆ ನಡೆಸಿದರು. ಈ ವೇಳೆ ಗ್ರಾಮಸ್ಥರು ಕೆರೆಗಳಿಗೆ ನೀರು ತುಂಬಿಸಲು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಚನ್ನರಾಯಪಟ್ಟಣ ತಾಲೂಕು ದಿಡಗ ಮತ್ತು ಕಬ್ಬಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಬಂದು 25 ವರ್ಷ ಕಳೆದಿವೆ. ಮಳೆಯಿಲ್ಲದೆ ಕೆರೆಕಟ್ಟೆಗಳ ಒಡಲು ಬರಿದಾಗಿದ್ದು, ನೀರಿಲ್ಲದೇ ಜನ-ಜಾನುವಾರು ಪರದಾಡುವಂತಾಗಿದೆ. ಲಕ್ಷ ಲಕ್ಷ ಖರ್ಚು ಮಾಡಿ 1 ಸಾವಿರ ಅಡಿ ಆಳ ಕೊಳವೆ ಬಾವಿ ಕೊರೆದರೂ, ನೀರು ಬರುತ್ತಿಲ್ಲ. ಗಾಯದ ಮೇಲೆ ಬರೆ ಎಂಬಂತೆ, ಫೆä್ಲೕರೈಡ್‌ ಭೀತಿಯೂ ನಮ್ಮನ್ನು ಕಾಡುತ್ತಿದೆ. ಕೆರೆ-ಕಟ್ಟೆತುಂಬಿಸಿ, ನಮ್ಮ ಸಮಸ್ಯೆ ಕೊನೆಗಾಣಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶಾಸಕರಿಂದ ಕೆರೆ ತುಂಬಿಸುವ ಭರವಸೆ:

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಶಾಸಕ ಬಾಲಕೃಷ್ಣ, ನಾಗಮಂಗಲದ ನಾಲೆಯಿಂದ ನೀರು ತರೋ ಯೋಜನೆ ವಿಳಂಬವಾಗಿದೆ. ಈಗಾಗಲೇ ಸರ್ಕಾರ, ಉಸ್ತುವಾರಿ ಸಚಿವರು ಮತ್ತು ಸಂಬಂಧಪಟ್ಟಅಧಿಕಾರಿಗಳ ಜೊತೆ ಮಾತನಾಡಿದ್ದು, ಆದಷ್ಟುಶೀಘ್ರವೇ ಬಹುದಿನಗಳ ಸಮಸ್ಯೆ ಬಗೆಹರಿಸಲಾಗುವುದು. ಈ ಬಾರಿಯ ಚುನಾವಣೆ ನೀತಿ ಸಂಹಿತೆ ಮುಗಿದ ಕೂಡಲೇ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭಾರವಸೆ ನೀಡಿದರು.