ಬೆಂಗಳೂರು [ಜು.17] :  ಕಡ್ಡಾಯ ಗ್ರಾಮೀಣ ಸೇವೆ ಸಲ್ಲಿಸುವುದಾಗಿ ಮುಚ್ಚಳಿಕೆ ನೀಡಿ ಉಲ್ಲಂಘಿಸಿರುವ ವೈದ್ಯರ ವಿರುದ್ಧ ನ್ಯಾಯಾಲಯದಲ್ಲಿ ಸಿವಿಲ್‌ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಎಂ.ಪಿ.ಸುನೀಲ್‌ ಸುಬ್ರಮಣಿ ಕೇಳಿದ ಪ್ರಶ್ನೆಗೆ ಸಚಿವರು ಈ ವಿಷಯ ತಿಳಿಸಿದರು.

ಗ್ರಾಮೀಣ ಸೇವೆ ಸಲ್ಲಿಸಲು ನಿರಾಕರಿಸಿರುವ ವೈದ್ಯರಿಗೆ ವಿಧಿಸುವ ದಂಡದ ಮೊತ್ತದಲ್ಲಿ ಶೇ.10ರಷ್ಟುಮೊತ್ತವನ್ನು ಶುಲ್ಕದ ರೂಪದಲ್ಲಿ ನ್ಯಾಯಾಲಯಕ್ಕೆ ಪಾವತಿಸಬೇಕಾಗಿದೆ. ಇದು ಸುಮಾರು 10 ಕೋಟಿ ರು.ಗಳನ್ನು ಮೀರುವ ಸಾಧ್ಯತೆಯಿದೆ. ಆದ್ದರಿಂದ ಕಾನೂನು ಇಲಾಖೆ ಅಭಿಪ್ರಾಯ ಕೋರಲಾಗಿದ್ದು, ಅಭಿಪ್ರಾಯ ಬಂದ ತಕ್ಷಣ ಮಂದಿನ ಕಾನೂನು ಹೋರಾಟದ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ. ಗ್ರಾಮೀಣ ಸೇವೆ ಸಲ್ಲಿಸಲು ನಿರಾಕರಿಸುವ ವೈದ್ಯಕೀಯ ಪದವಿ ಪೂರ್ಣಗೊಳಿಸಿರುವವರಿಗೆ 10 ಲಕ್ಷ, ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದ ವೈದ್ಯರಿಗೆ 50 ಲಕ್ಷ ಮತ್ತು ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದ ವೈದ್ಯರಿಗೆ 25 ಲಕ್ಷ ರು.ಗಳನ್ನು ದಂಡ ವಿಧಿಸಬಹುದಾಗಿದೆ ಎಂದು ಹೇಳಿದ್ದಾರೆ.

ವೈದ್ಯರ ಕಡ್ಡಾಯ ಗ್ರಾಮೀಣ ಸೇವೆಯನ್ನು ಪ್ರಸಕ್ತ ವರ್ಷದಿಂದ ಜಾರಿ ಮಾಡಲು ಅಧಿಸೂಚನೆ ಹೊರಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವೈದ್ಯಕೀಯ ಶಿಕ್ಷಣ ಪೂರೈಸಿದ ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆ ಜಾರಿಗೊಳಿಸುವ ನಿಟ್ಟಿನಲ್ಲಿ ‘ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ’ ಜಾರಿ ಮಾಡಲಾಗಿದೆ. ಈ ಕಾಯಿದೆಗೆ ಪ್ರಸ್ತುತ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ತಿಳಿಸಿದರು.