ಮೋದಿ ಸರ್ಕಾರದ ವಿರುದ್ಧ ಸೇವಾ ಹಿರಿತನ ಕಡೆಗಣಿಸಿದ ಆರೋಪ| ವಿವಾದಕ್ಕೆ ಕಾರಣವಾದ ನೌಕಾಪಡೆ ಮುಖ್ಯಸ್ಥರ ನೇಮಕ| ತಮ್ಮ ಸೇವಾ ಹಿರಿತನ ಕಡೆಗಣಿಸಲಾಗಿದೆ ಎಂದು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಆರೋಪ| ಕರಮ್ ಬೀರ್ ಸಿಂಗ್ ನೇಮಕಕ್ಕೆ ಬಿಮಲ್ ವರ್ಮಾ ವಿರೋಧ| ಸಶಸ್ತ್ರ ಪಡೆಗಳ ಟ್ರಿಬ್ಯೂನಲ್ ಕದ ತಟ್ಟಿದ ಬಿಮಲ್ ವರ್ಮಾ| ಭೂಸೇನಾ ಮುಖ್ಯಸ್ಥರ ನೇಮಕದಲ್ಲೂ ಕೇಳಿ ಬಂದಿದ್ದ ಅಸಮಾಧಾನ|
ನವದೆಹಲಿ(ಏ.08): ನೌಕಾಪಡೆ ಮುಖ್ಯಸ್ಥರ ನೇಮಕದ ವಿಚಾರದಲ್ಲಿ ಅನ್ಯಾಯವಾಗಿದ್ದು, ತಮ್ಮ ಸೇವಾ ಹಿರಿತನ ಕಡೆಗಣಿಸಿ ತಮಗಿಂತ ಕಿರಿಯರಾದ ಕರಮ್ ಬೀರ್ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಆರೋಪಿಸಿದ್ದಾರೆ.
ಈ ಕುರಿತು ಸಶಸ್ತ್ರ ಪಡೆಗಳ ಟ್ರಿಬ್ಯೂನಲ್ ಕದ ತಟ್ಟಿರುವ ಬಿಮಲ್ ವರ್ಮಾ, ನೌಕಾಪಡೆ ಮುಖ್ಯಸ್ಥರನ್ನು ನೇಮಿಸುವಾಗ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೇಲೆ, ಎರಡನೇ ಬಾರಿ ಸೇವಾ ಹಿರಿತನವನ್ನು ಕಡೆಗಣಿಸಿ ಕಿರಿಯರನ್ನು ಮುಖ್ಯಸ್ಥರನ್ನಾಗಿ ನೇಮಿಸಿದ ಆರೋಪ ಕೇಳಿ ಬಂದಿದೆ.
2016ರಲ್ಲಿ ಲೆ.ಜ. ಪ್ರವೀಣ್ ಭಕ್ಷಿ ಅವರ ಸೇವಾ ಹಿರಿತನವನ್ನು ಕಡೆಗಣಿಸಿ, ಬಿಪಿನ್ ರಾವತ್ ಅವರನ್ನು ಭೂಸೇನಾ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆಗಲೂ ಸರ್ಕಾರದ ವಿರುದ್ಧ ಹಿರಿಯ ಅಧಿಕಾರಿಗಳು ಅಸಮಾಧಾನ ಹೊರಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು.
