ನವದೆಹ;ಇ[ಸೆ.08]: ಮಾಜಿ ಕಾನೂನು ಸಚಿವ ಹಾಗೂ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಭಾನುವಾರ ಮುಂಜಾನೆ ವಿಧಿವಶರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜೇಠ್ಮಲಾನಿ ಕಳೆದೆರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಇಂದು ಭಾನುವಾರ ಮುಂಜಾನೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮ್ ಜೇಠ್ಮಲಾನಿಗೆ 96 ವರ್ಷ ವಯಸ್ಸಾಗಿತ್ತು.

ರಾಮ್‌ಬೂಲ್‌ ಚಂದ್‌ ಜೇಠ್ಮಲಾನಿ ಸಿಂಧ್‌ ಪ್ರಾಂತ್ಯದ ಶಿಕಾರ್ಪುರದಲ್ಲಿ 1923ರ ಸೆಪ್ಟೆಂಬರ್‌ 14ರಂದು ಜನಿಸಿದರು. ತನ್ನ 13ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್‌ ಮುಗಿಸಿದ ಜೇಠ್ಮಲಾನಿ 17ನೇ ವಯಸ್ಸಿಗೇ ಕಾನೂನು ಪದವಿ ಪಡೆದಿದ್ದರು. 

ಹತ್ತಾರು ಹೈಪ್ರೊಫೈಲ್​ ಹಾಗೂ ವಿವಾದಿತ ಕೇಸ್​ಗಳಲ್ಲಿ ದಿಟ್ಟವಾಗಿ ವಾದ ಮಂಡಿಸಿ, ಸಮರ್ಥವಾಗಿ ನಿಭಾಯಿಸಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಜೇಠ್ಮಲಾನಿ, 2017ರಲ್ಲಿ ತಮ್ಮ ವಕೀಲಿ ವೃತ್ತಿಗೆ ವಿದಾಯ ಹೇಳಿದ್ದರು. ಮಾಜಿ ಪ್ರಧಾನಿ ಪಿ.ವಿ. ನರಸಿಂಹ್ ರಾವ್ ಮಾತ್ರವಲ್ಲದೇ ಹಲವು ಗಣ್ಯರ ಪರ ವಾದ ಮಂಡನೆ ಮಾಡಿದ್ದರು.

ಭಾರತೀಯ ಜನತಾ ಪಕ್ಷದಿಂದ ಮುಂಬೈನಲ್ಲಿ ಚುನಾವಣೆ ಎದುರಿಸಿದ್ದ ಜೇಠ್ಮಲಾನಿ ಎರಡು ಬಾರಿ ಸಂಸದರಾಗಿದ್ದರು. ಕಾನೂನು ಹಾಗೂ ನಗರಾಭಿವೃದ್ದಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅವರು 2010ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.