ಬೆಂಗಳೂರು[ಅ.27]: ಹಿರಿಯ ಲೇಖಕ, ನಿವೃತ್ತ ಸಮಾಜ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಹೆಚ್. ಎಂ. ಮರುಳಸಿದ್ದಯ್ಯ‌ [87] ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಕೊನೆಯಿಸಿರೆಳದಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಅಪಾರ ಶಿಷ್ಯವೃಂದವನ್ನು ಅಗಲಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿರೇ ಕುಂಬಳಗುಂಟೆ ಗ್ರಾಮದಲ್ಲಿ 29, ಜುಲೈ 1931 ರಲ್ಲಿ ಜನಿಸಿದ ಶ್ರೀಯುತರು ತಮ್ಮ ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮೈಸೂರು ಹಾಗೂ ದೆಹಲಿ ವಿವಿಯಿಂದ ಸಮಾಜಶಾಸ್ತ್ರ ಪದವಿ ಹಾಗೂ ವಾರನಾಸಿಯ ಮಹಾತ್ಮ ಗಾಂಧಿ ಕಾಶಿ ವಿದ್ಯಾ ಪೀಠದ ವಿವಿಯಿಂದ ಡಾಕ್ಟರೇಟ್ ಪದವಿ ಪಡೆದಿದ್ದರು. 

ಮದ್ರಾಸ್ ವಿವಿಯಿಂದ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ತದ ನಂತರ ಹಂಪಿ, ಧಾರವಾಡ ಹಾಗೂ ಬೆಂಗಳೂರು ವಿವಿಗಳಲ್ಲಿ ಪ್ರಾಧ್ಯಾಪಕರಾಗಿ 1994ರಲ್ಲಿ ನಿವೃತ್ತರಾದರು. ಅಧ್ಯಾಪದ ಜೊತೆ ಸಂಶೋಧನೆ, ಮಾರ್ಗದರ್ಶನ, ಲೇಖಕರಾಗಿ ಬಹುಮುಖ ಪ್ರತಿಭೆಯಾಗಿದ್ದರು. ತಾವು ಹುಟ್ಟಿ ಬೆಳೆದ ಮನೆಯನ್ನೇ ಪುನಃ ನವೀಕರಿಸಿ ಪುಸ್ತಕ ಮನೆಯನ್ನಾಗಿ ರೂಪಾಂತರಿಸಿದ್ದರು. ಸಮಾಜಶಾಸ್ತ್ರದಲ್ಲಿ ಸ್ವಂತಿಕೆಯ ಆಲೋಚನೆ ಮಾಡಿದ ಬೆರಳೆಣಿಕೆಯ ವಿದ್ವಾಂಸರಲ್ಲಿ ಇವರು ಪ್ರಮುಖರಾಗಿದ್ದರು.

40 ಕ್ಕೂ ಹೆಚ್ಚು ಕೃತಿ ರಚನೆ
ಪಾಶ್ಚಾತ್ಯ ಚಿಂತಕರ ದೃಷ್ಟಿಯಲ್ಲಿ ಭಾರತೀಯ ಸಮಾಜ, ಧಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ, ಸಮಾಜ ಶಾಸ್ತ್ರ: ಕೆಲವು ಒಳನೋಟಗಳು,ಬಿದ್ದುದು ಗರಿಯಲ್ಲ, ಹಕ್ಕಿಯೇ ಪಂಚಮುಖಿ ಅಭ್ಯುದಯ ಮಾರ್ಗ, ನಿರ್ಮಲ ಕರ್ನಾಟಕ, ವಚನಗಳಲ್ಲಿ ಅಂತರಂಗ ಬಹಿರಂಗ ಶುದ್ಧಿ, ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ ಸೇರಿದಂತೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

ಮರುಳಸಿದ್ದಯ್ಯನವರ ಅಂತ್ಯಕ್ರಿಯೆಯು ನಾಳೆ (ಅ. 28, ಭಾನುವಾರ) ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯ ವೀರಶೈವರ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬ ವರ್ಗ ತಿಳಿಸಿದೆ.