ನವದೆಹಲಿ:  ಹಿರಿಯ ಪತ್ರಕರ್ತ, ಮಾಜಿ ರಾಜ್ಯಸಭಾ ಸಂಸದ, ಮಾನವ ಹಕ್ಕುಗಳ ಹೋರಾಟಗಾರ ಕುಲ್ದೀಪ್ ನಯ್ಯರ್ ವಿಧಿವಶರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ 95 ವರ್ಷ ವಯಸ್ಸಿನ ಕುಲ್ದೀಪ್ ನಯ್ಯರ್  ಬುಧವಾರ ರಾತ್ರಿ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಿ ಸ್ಟೇಟ್ಸ್ ಮ್ಯಾನ್ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದ್ದ ನಯ್ಯರ್ ದೇಶದ ಹಲವಾರು ಪತ್ರಿಕೆಗೆಳಿಗೆ ಅಂಕಣಕಾರರಾಗಿದ್ದರು. ಸುಮಾರು 15 ಕೃತಿಗಳನ್ನು ನಯ್ಯರ್ ರಚಿಸಿದ್ದಾರೆ.

14 ಆಗಸ್ಟ್ 1923ರಂದು ಸ್ವಾತಂತ್ರ್ಯಪೂರ್ವ ಭಾರತದ ಸಿಯಾಲ್ ಕೋಟ್, ಪಂಜಾಬ್ [ಈಗ ಪಾಕಿಸ್ತಾನ] ನಲ್ಲಿ ಜನಿಸಿದ್ದ ಕುಲ್ದೀಪ್ ನಯ್ಯರ್ ,  ಪತ್ರಿಕೋದ್ಯಮಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ.

ಮಾನವ ಹಕ್ಕು ಮತ್ತು ಜಾತ್ಯತೀತ ಮೌಲ್ಯಗಳ ಪ್ರಬಲ ಪ್ರತಿಪಾದಕನಾಗಿದ್ದ ನಯ್ಯರ್, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು. 

1997ರಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಕುಲ್ದೀಪ್ ನಯ್ಯರ್ , ವಿವಿಧ ಕಾರ್ಯಕ್ರಮಗಳ ಮೂಲಕ ಭಾರತ- ಪಾಕಿಸ್ತಾನ ನಡುವೆ ಶಾಂತಿ ಸ್ಥಾಪನೆಗಾಗಿ ಪ್ರಯತ್ನಗಳನ್ನು ನಡೆಸುತ್ತಾ ಬಂದಿದ್ದರು.