ನವದೆಹಲಿ[ಆ.18]: ದೂರದರ್ಶನ ಸುದ್ದಿವಾಹಿನಿಯ ಸಂಸ್ಥಾಪಕ ನಿರೂಪಕಿಯರಲ್ಲಿ ಒಬ್ಬರಾದ ನೀಲಂ ಶರ್ಮಾ (50) ಶನಿವಾರ ನಿಧನರಾದರು. ಅವರು ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ದೂರದರ್ಶನದಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ನೀಲಂ ಶರ್ಮಾ, ಡಿಡಿ ನ್ಯೂಸ್‌ನ ಸಂಸ್ಥಾಪಕ ನಿರೂಪಕರ ಪೈಕಿ ಒಬ್ಬರಾಗಿದ್ದರು. ಸುದ್ದಿ ನಿರೂಪಣೆಯ ಜೊತೆಗೆ ‘ಬಡೀ ಚರ್ಚಾ’ ಹಾಗೂ ಮಹಿಳಾ ವಿಶೇಷ ‘ತೇಜಸ್ವಿನಿ’ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. 60ಕ್ಕೂ ಹೆಚ್ಚು ಸಾಕ್ಷ್ಯ ಚಿತ್ರಗಳನ್ನೂ ಅವರು ನಿರ್ಮಿಸಿದ್ದರು.

ತೇಜಸ್ವಿನಿ ಕಾರ್ಯಕ್ರಮಕ್ಕಾಗಿ 2018ರಲ್ಲಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ನಾರಿ ಶಕ್ತಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ನೀಲಂ ಶರ್ಮಾ ಅವರ ಅಕಾಲಿಕ ನಿಧನಕ್ಕೆ ದೂರದರ್ಶನ ವಾಹಿನಿ ಸಂತಾಪ ಸೂಚಿಸಿದೆ. ಅದೇ ರೀತಿ ಹಲವಾರು ಗಣ್ಯರು ಟ್ವೀಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.