ಮುಂಬೈ[ಜ.01]: ಹೊಸ ವರ್ಷದ ಆರಂಭದಲ್ಲೇ ಬಾಲಿವುಡ್‌ನಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಮೆದುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಮೇರು ನಟ ಖಾದರ್ ಖಾನ್ ತಮ್ಮ 81 ನೆ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ನಟನ ಸಾವಿನ ಸುದ್ದಿಯನ್ನು ಅವರ ಪುತ್ರ ಸರ್ಫರಾಜ್  ಖಚಿತಪಡಿಸಿದ್ದಾರೆ.

ಕಾದರ್ ಪ್ರೊಗ್ರೆಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸೀ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಖಾದರ್ ಖಾನ್, ಕೊನೆಯ ಬಾರಿ 2015ರಲ್ಲಿ ತೆರೆ ಕಂಡ 'ದಿಮಾಗ್ ಕಾ ದಹೀ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ದೀರ್ಘ ಸಮಯದಿಂದ ಅವರು ಕೆನಡಾದಲ್ಲಿರುವ ತಮ್ಮ ಮಗ ಸರ್ಫರಾಜ್ ಹಾಗೂ ಸೊಸೆ ಶಾಹಿಸ್ತಾರೊಂದಿಗಿದ್ದರು. ನಾಲ್ಕು ದಿನಗಳ ಹಿಂದಷ್ಟೇ ಖಾದರ್ ಖಾನ್ ಮಗ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದ್ದರು. 

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಕಾದರ್ ಸಂವಾದ ಲೇಖನಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ತನ್ನ ಆಕರ್ಷಕ ಧ್ವನಿ ಹಾಗೂ ಅದ್ಭುತ ಕಾಮಿಕ್ ಟೈಮಿಂಗ್ ಗೆ ಸುಪ್ರಸಿದ್ಧರಾಗಿರುವ ಕಾದರ್ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

90ರ ದಶಕದಲ್ಲಿ ನಟ ಗೋವಿಂದಾ ಹಾಗೂ ಖಾದರ್ ಖಾನ್ ಜೋಡಿಯನ್ನು ಹಿಟ್ ಫಾರ್ಮುಲಾ ಎಂದೇ ಕರೆಯಲಾಗುತ್ತಿತ್ತು. ಇವರಿಬ್ಬರೂ ದೂಲ್ಹೇ ರಾಜಾ, ಕುಲೀ ನಂಬರ್ 1, ರಾಜಾ ಬಾಬೂ ಹಾಗೂ ಆಂಖೆ ಯಂತಹ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ.