ಬೆಂಗಳೂರು :  ರಾಜ್ಯದ ಕರಾವಳಿ ಸೇರಿದಂತೆ ಮಲೆನಾಡು ಭಾಗದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮಂಗಳವಾರವೂ ಭಾರೀ ಮಳೆಯಾಗಿದೆ. ಬುಧವಾರ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ 115 ಮಿ.ಮೀ.ಗೂ ಅಧಿಕ ಪ್ರಮಾಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ (ಕೆಎಸ್‌ಎನ್‌ಡಿಎಂಸಿ) ಜಿ.ಎಸ್‌. ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 8-30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉಡುಪಿ 184.4 ಮಿ.ಮೀ ಮಳೆಯಾಗಿದ್ದು, ಹೊನ್ನಾವರ 145.3, ಕೊಡಗು 116.1, ಶಿವಮೊಗ್ಗ 104.2, ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 96.7, ಚಿಕ್ಕಮಗಳೂರು 76.7, ಮಂಗಳೂರು ವಿಮಾನ ನಿಲ್ದಾಣ 54.8, , ಹಾಸನ 39.3, ಹಾವೇರಿ 15 ಹಾಗೂ ಬೆಳಗಾವಿ ವಿಮಾನ ನಿಲ್ದಾಣ 14.4 ಮಿ.ಮೀ. ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ

ಸೋಮವಾರ ಸುರಿದ ಭಾರಿ ಮಳೆಗೆ ರಾಜ್ಯದ 80 ಮನೆಗಳಿಗೆ ಹಾನಿ ಉಂಟಾಗಿದೆ. ಅದರಲ್ಲಿ ಉಡುಪಿ ಜಿಲ್ಲೆಯೊಂದರಲ್ಲಿ ಬರೊಬ್ಬರಿ 64, ಹಾಸನದಲ್ಲಿ 8, ಚಿಕ್ಕಮಗಳೂರು ಜಿಲ್ಲೆಯಲ್ಲಿ 7 ಮನೆಗಳಿಗೆ ಹಾನಿಯಾಗಿದೆ.

ಮೀನುಗಾರರಿಗೆ ಎಚ್ಚರಿಕೆ:  ಅರಬ್ಬಿ ಸಮುದ್ರದಲ್ಲಿ ನೈಋುತ್ಯ ಮಾರುತಗಳು ಪ್ರಬಲಗೊಂಡಿರುವುದರಿಂದ ಗಂಟೆಗೆ 35ರಿಂದ 65 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಕರಾವಳಿ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.