Asianet Suvarna News Asianet Suvarna News

ಬ್ಯಾಂಕಿಂಗ್ ಕ್ಷೇತ್ರವನ್ನು ಕನ್ನಡೀಕರಣಗೊಳಿಸಿ

ನಮ್ಮ ಕನ್ನಡಿಗರಿಗೆ ಬ್ಯಾಂಕ್‌ಗಳಲ್ಲಿ ಹುದ್ದೆ ನೀಡುತ್ತಿಲ್ಲ. ಕನ್ನಡಿಗರಿಗೆ ಸಿಗಬೇಕಾದ ಅವಕಾಶವನ್ನು ಬೇರೆ ರಾಜ್ಯದವರು ಪಡೆದುಕೊಳ್ಳುತ್ತಿದ್ದಾರೆ

Vatal Nagaraj Protest For Want Kannada at banks

ಬೆಂಗಳೂರು(ಫೆ.04): ರಾಜ್ಯದಲ್ಲಿನ ಬ್ಯಾಂಕಿಂಗ್ ವಲಯವನ್ನು ಸಂಪೂರ್ಣ ಕನ್ನಡೀಕರಿಸಬೇಕು ಎಂದು ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯವಾಗುತ್ತಿದೆ. ನಮ್ಮ ಕನ್ನಡಿಯರಿಗೆ ಬ್ಯಾಂಕ್‌ಗಳಲ್ಲಿ ಹುದ್ದೆ ನೀಡುತ್ತಿಲ್ಲ. ಕನ್ನಡಿಗರಿಗೆ ಸಿಗಬೇಕಾದ ಅವಕಾಶವನ್ನು ಬೇರೆ ರಾಜ್ಯದವರು ಪಡೆದುಕೊಳ್ಳುತ್ತಿದ್ದಾರೆ. ಆದುದರಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎಲ್ಲವನ್ನೂ ಕನ್ನಡೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನೌಕರರನ್ನು ನೇಮಕಾತಿ ಮಾಡುವಾಗ ಕನ್ನಡ ಬರೆಯಲು ಮತ್ತು ಓದಲು ಬರಬೇಕು ಎಂಬ ಅಸೂಚನೆ ಇದೆ. ಆದರೂ ಐಬಿಪಿಎಸ್ ಸಂಸ್ಥೆ ಎಲ್ಲ ರಾಷ್ಟ್ರೀಕೃತ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ನೌಕರರ ನೇಮಕಾತಿ ವೇಳೆ ಸರ್ಕಾರಿ ಅಸೂಚನೆ ಕಡೆಗಣಿಸಿ ಬೇರೆ ರಾಜ್ಯದವರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಇದರಿಂದ ರಾಜ್ಯದ ಒಟ್ಟಾರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ. 80ರಷ್ಟು ಹೊರ ರಾಜ್ಯದವರು ಆವರಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 36 ವರ್ಷಗಳಿಂದ ಅಕಾರಕ್ಕೆ ಬಂದ ಯಾವುದೇ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ನು ಜಾರಿ ಮಾಡದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ಹೊರ ರಾಜ್ಯದವರಿಗೆ ಸ್ಥಳೀಯ ಭಾಷೆಗಳ ಜ್ಞಾನವಿರುವುದಿಲ್ಲ. ಈ ಸತ್ಯ ತಿಳಿದಿದ್ದರೂ ಬ್ಯಾಂಕ್‌ಗಳಲ್ಲಿ ಅವರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಜನಸಾಮಾನ್ಯರು ವ್ಯವಹರಿಸಲು ಕಷ್ಟವಾಗುತ್ತಿದೆ. ಇಂಗ್ಲಿಷ್ ಮತ್ತು ಹಿಂದಿಯಲ್ಲಿರುವ ಚೆಕ್‌ಗಳು ಸಹ ಕನ್ನಡದಲ್ಲಿ ಸಿಗುವಂತಾಗಬೇಕು. ಬ್ಯಾಂಕ್‌ನಲ್ಲಿ ಶೇ.100 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. ಮುಂದಿನ ಅವೇಶನದಲ್ಲಿ ಐಟಿ ಬಿಟಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಎಷ್ಟು ಪ್ರಮಾಣದಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ ಎಂಬುದರ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿ ಕನ್ನಡಿಗರಿಗೆ ಅವಕಾಶ ಕಲ್ಪಿಸಬೇಕು. ಶೇ.100 ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು ಎಂದು ಆಗ್ರಹಿಸಿ ಮಾ.4 ರಂದು ನಗರದ ಟೌನ್‌ಹಾಲ್ ಮುಂಭಾಗದಲ್ಲಿರುವ ಕೆನರಾ ಬ್ಯಾಂಕ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Follow Us:
Download App:
  • android
  • ios