ಇವರೇನು ತಮಿಳುನಾಡಿನ ಪ್ರಧಾನಿಯೋ? ಭಾರತದ ಪ್ರಧಾನಿಯೋ? ಎಂದು ವಾಟಾಳ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು(ಜ. 20): ಜಲ್ಲಿಕಟ್ಟು ವಿಚಾರದಲ್ಲಿ ತಮಿಳಿಗರ ಒತ್ತಾಯಕ್ಕೆ ಬಗ್ಗಿದ ಕೇಂದ್ರ ಸರಕಾರದ ಧೋರಣೆಯನ್ನು ಕನ್ನಡ ಪರ ಹೋರಾಟಗಾರರು ಖಂಡಿಸಿದ್ದಾರೆ. ಸುಪ್ರೀಂಕೋರ್ಟನ್ನು ಧಿಕ್ಕರಿಸುವ ಮಂದಿಗೆ ಬೆಂಬಲ ಕೊಡುತ್ತಿರುವ ಕೇಂದ್ರ ಸರಕಾರದ್ದು ಹೊಲಸು ರಾಜಕೀಯ ಎಂದು ವಾಟಾಳ್ ನಾಗರಾಜ್ ಬಣ್ಣಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ವಾಟಾಳ್, ಕೆಲಸಕ್ಕೆ ಬಾರದ ಜಲ್ಲಿಕಟ್ಟು ವಿಚಾರದಲ್ಲಿ ಸುಗ್ರೀವಾಜ್ಞೆ ತರಬಲ್ಲಿರಾದರೆ ಮಹದಾಯಿ, ಕಾವೇರಿಯಂತಹ ಗಂಭೀರ ವಿಷಯಗಳಲ್ಲಿ ಯಾಕೆ ಸಾಧ್ಯವಾಗಲಿಲ್ಲ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯದ ಸಿಎಂ ಸಿದ್ದರಾಮಯ್ಯನವರು ಭೇಟಿ ಮಾಡಲು ಎಷ್ಟು ಬಾರಿ ಯತ್ನಿಸಿದರೂ ಕೇರ್ ಮಾಡದ ಮೋದಿ, ತಮಿಳುನಾಡು ಸಿಎಂ ಪನ್ನೀರ್'ಸೆಲ್ವಂ ಬಂದಾಕ್ಷಣ ಪಕ್ಕದಲ್ಲಿ ಕೂರಿಸಿಕೊಂಡು ಮಾತನಾಡುವುದೇನು? ಇವರೇನು ತಮಿಳುನಾಡಿನ ಪ್ರಧಾನಿಯೋ? ಭಾರತದ ಪ್ರಧಾನಿಯೋ? ಎಂದು ವಾಟಾಳ್ ಅನುಮಾನ ವ್ಯಕ್ತಪಡಿಸಿದ್ದಾರೆ.
"ಡಿಎಂಕೆ, ಎಐಎಡಿಎಂಕೆ ಪಕ್ಷಗಳು ದೇಶ ಒಡೆಯುವ ಚಿಂತನೆಯಿಂದ ಬೆಳೆದುಕೊಂಡು ಬಂದಿವೆ. ಅಂಥವರಿಗೆ ಪ್ರಧಾನಿ ಹೆಚ್ಚು ಮನ್ನಣೆ ಕೊಡುತ್ತಿರುವುದು ದುರದೃಷ್ಟಕರ. ಮೋದಿ ಬೆಳಗಾವಿ, ಮೈಸೂರಿಗೆ ಬಂದಾಗ ಮಹದಾಯಿ, ಕಾವೇರಿ, ಗಡಿ ವಿಷಯಗಳ ಬಗ್ಗೆ ಮಾತನಾಡುವುದೇ ಇಲ್ಲ. ಇದೆಂಥಾ ಹೊಲಸು ರಾಜಕೀಯ? ಮೋದಿ ಭಕ್ತರು, ಅಭಿಮಾನಿಗಳು ಏನು ಮಾಡುತ್ತಿದ್ದಾರೆ..?" ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿದ್ದೇವೆಯಾ?
ರಾಜ್ಯ ಸರಕಾರದ ಮೇಲೆ ಕೇಂದ್ರವು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕನ್ನಡ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. "ರಾಜ್ಯದಲ್ಲಿ ಬಿಜೆಪಿಯಿಂದ 18 ಸಂಸದರು ಆಯ್ಕೆಯಾಗಿದ್ದರೂ, ಇಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಕೇಂದ್ರ ತಾರತಮ್ಯ ಮಾಡುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಬೆಂಗಳೂರಿನಲ್ಲಿ ಜಲ್ಲಿಕಟ್ಟು ಪರ ಅನೇಕ ಕಾರ್ಪೊರೇಟ್ ಕಂಪನಿಗಳು ಹೋರಾಟ ನಡೆಸುತ್ತಿವೆ. ಇದೆಲ್ಲಾ ನೋಡಿದರೆ ನಾವು ಕರ್ನಾಟಕದಲ್ಲಿದ್ದೇವೋ ಅಥವಾ ಬೇರೆ ರಾಜ್ಯದಲ್ಲಿದ್ದೇವೆಯೋ? ನಾಡು, ನುಡಿ ಮತ್ತು ಜಲ ವಿಷಯದಲ್ಲಿ ನಾವೆಲ್ಲಾ ಕನ್ನಡಿಗರೂ ಒಗ್ಗೂಡದೇ ಹೋದರೆ ಭವಿಷ್ಯ ಕಠಿಣವಾಗಿರುತ್ತದೆ," ಎಂದು ಶೆಟ್ಟಿ ಎಚ್ಚರಿಸಿದ್ದಾರೆ.
ಇದೇ ವೇಳೆ, ಸುವರ್ಣನ್ಯೂಸ್ ಜೊತೆ ಮಾತನಾಡಿದ ಜೆಡಿಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಅವರು ರಾಜ್ಯದ ಮುಖಂಡರಿಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಒಗ್ಗಟ್ಟು ಇಲ್ಲ ಎಂದು ನೋವು ವ್ಯಕ್ತಪಡಿಸಿದ್ದಾರೆ.
